ರೈತ ವಿರೋಧಿ ನೀತಿಗಳಿಗೆ ಕಾನೂನು ತಿದ್ದುಪಡಿಗೆ ಕ್ರಮ: ಸಿಎಂ ಬೊಮ್ಮಾಯಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ರೈತ ವಿರೋಧಿ ನೀತಿಗಳಿಗೆ ಕಾನೂನು ತಿದ್ದುಪಡಿ ಮಾಡುವುದರ ಮೂಲಕ ರೈತರಿಗೆ ಸಾಲ ತೀರಿಸುವ ಅವಕಾಶ ಮಾಡಿಕೊಟ್ಟು, ಮನೆ, ಆಸ್ತಿ-ಪಾಸ್ತಿ ಜಫ್ತಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಶನಿವಾರ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಮೂವತ್ತನೆಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರ ಸಂಕಷ್ಟದ ಸಂದರ್ಭದಲ್ಲಿ ಹಣಕಾಸಿನ ಸಂಸ್ಥೆಗಳಾದ ಬ್ಯಾಂಕುಗಳು ಜಫ್ತಿ ಮಾಡುವುದರ ಮೂಲಕ ನೋಟಿಸ್ ಕೊಡುವ ಕಾರ್ಯಕ್ಕೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತ ತಕ್ಷಣವೇ ರೂ.14 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರದ ನೆರವು ಸಿಗಲಿದೆ. ಈ ಯೋಜನೆ ಪೂರ್ಣಗೊಳ್ಳಲು ದೊಡ್ಡ ಹಣಕಾಸಿನ ಶಕ್ತಿ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 14 ಲಕ್ಷ ರೈತರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರ ಮಕ್ಕಳು ಸೇರಿದಂತೆ ದುಡಿಯುವ ವರ್ಗದ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುವುದು.ಯಾವುದೇ ಕಾರಣಕ್ಕೂ ಹಣಕಾಸಿನ ಅಡಚಣೆಯಿಂದ ರೈತರ ಮಕ್ಕಳ ವಿದ್ಯಾಭ್ಯಾಸ ಮೊಟಕಾಗಬಾರದು ಎಂದರು.

ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಗುರುವಂದನೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು‌.

ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!