Tuesday, August 9, 2022

Latest Posts

ಮಕ್ಕಳಿಗಾಗಿ ಡಿಜಿಟಲ್ ಡೀ ಅಡಿಕ್ಷನ್ ಕೇಂದ್ರಗಳ ಸ್ಥಾಪನೆ: ಕೇರಳ ಮುಖ್ಯಮಂತ್ರಿ

ಹೊಸ ದಿಗಂತ ವರದಿ, ಕಾಸರಗೋಡು:

ಆನ್ ಲೈನ್ ಗೇಮ್ ನಂತಹ ಸೈಬರ್ ಅಪರಾಧಗಳಿಗೆ ತುತ್ತಾದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವುದಕ್ಕಾಗಿ ಪೊಲೀಸರ ನೇತೃತ್ವದಲ್ಲಿ ಡಿಜಿಟಲ್ ಡೀ ಅಡಿಕ್ಷನ್ ಕೇಂದ್ರಗಳನ್ನು ಆರಂಭಿಸಲಾಗುವುದು. ಇದು ಪೊಲೀಸ್ ಠಾಣೆಗಳನ್ನು ಮಕ್ಕಳ
ಸೌಹಾರ್ದ ಕೇಂದ್ರವಾಗಿಸುವ ಯೋಜನೆಯ ಜೊತೆಗೇ ನಡೆಯಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೇರಳ ಪೊಲೀಸರ ವಿವಿಧ ಯೋಜನೆಗಳ, ನೂತನ ಕಟ್ಟಡಗಳ ಉದ್ಘಾಟನೆಯನ್ನು ಆನ್ ಲೈನ್ ಮೂಲಕ ಶನಿವಾರ ನೆರವೇರಿಸಿ ಅವರು ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ಈ ಹಿಂದೆ ನಡೆಯದೇ ಇರುವಷ್ಟು ಬೃಹತ್ ಪ್ರಮಾಣದಲ್ಲಿ ರಾಜ್ಯದಲ್ಲಿ ಬದಲಾವಣೆ ತರಲಾಗಿದೆ. ಪೊಲೀಸ್ ಠಾಣೆಗಳನ್ನು ಜನಪರಗೊಳಿಸುವುದು, ಪೊಲೀಸರಿಗೆ ಜನಸೇವೆಯ ಮುಖ ಒದಗಿಸುವ ಯತ್ನ ಸಫಲವಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಮಾದರಿ ಚಟುವಟಿಕೆಗಳನ್ನು ಪೊಲೀಸರು ನಡೆಸುತ್ತಿದ್ದಾರೆ. ಓಖಿ, ನೆರೆ ಹಾವಳಿ ಇತ್ಯಾದಿ ನಡೆದ ವೇಳೆ ಸಂರಕ್ಷಣೆಗೆ ಪೊಲೀಸರು ಜನತೆಯ ಜೊತೆಗಿದ್ದರು ಎಂದು ಅವರು ಹೇಳಿದರು.
ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಡಿವೈಎಸ್ ಪಿ ಕಚೇರಿಗಳ ಸಹಿತ 5 ಪೊಲೀಸ್ ಠಾಣೆಗಳಲ್ಲಿ ಸಂದರ್ಶಕರ ಕೊಠಡಿ ಉದ್ಘಾಟನೆಗೊಂಡಿವೆ. 2 ಪೊಲೀಸ್ ಠಾಣೆಗಳು ನೂತನ ಕಟ್ಟಡಗಳಲ್ಲಿ ಚಟುವಟಿಕೆ ಆರಂಭಗೊಳಿಸಿವೆ. ಕಾಸರಗೋಡು, ವಿದ್ಯಾನಗರ, ಬದಿಯಡ್ಕ , ಚೀಮೇನಿ ಪೊಲೀಸ್ ಠಾಣೆಗಳಲ್ಲಿ , ಕಾಸರಗೋಡು ಡಿವೈಎಸ್ ಪಿ ಠಾಣೆಯಲ್ಲಿ ಸಂದರ್ಶಕರ ಕೊಠಡಿ ತೆರೆಯಲಾಗಿದೆ.
ಕಾಸರಗೋಡು ಪೊಲೀಸ್ ಠಾಣೆಯ ನವೀಕೃತ ನೂತನ ಕಟ್ಟಡದ ಶಿಲಾಫಲಕವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅನಾವರಣಗೊಳಿಸಿದರು. ಸಂದರ್ಶಕರ ಕೊಠಡಿಯನ್ನೂ ಅವರು ತೆರೆದರು. ಠಾಣೆಗೆ ಪಲ್ಸ್ ಆಕ್ಸೀಮೀಟರ್ ನ್ನು ಅವರು ಹಸ್ತಾಂತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಕಾಸರಗೋಡು ನಗರಸಭೆಯ ಅಧ್ಯಕ್ಷ , ವಕೀಲ ವಿ.ಎಂ.ಮುನೀರ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ., ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ , ವಕೀಲೆ ಝಮೀರಾ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ 5 ಪೊಲೀಸ್ ಠಾಣೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರಗಳು ಸಜ್ಜುಗೊಂಡಿವೆ. ಕುಂಬಳೆ, ವಿದ್ಯಾನಗರ, ಅಂಬಲತ್ತರ, ಬೇಡಗಂ, ಬೇಕಲ ಠಾಣೆಗಳಲ್ಲಿ ಹೆತ್ತವರೊಂದಿಗೆ ಠಾಣೆಗಳಿಗೆ ಆಗಮಿಸುವ ಮಕ್ಕಳಿಗಾಗಿ ಭಯವಿಲ್ಲದೆ ವಿಹರಿಸಲು, ಟೀವಿ ವೀಕ್ಷಣೆಗೆ, ಪುಸ್ತಕ ವಾಚನ, ಚಿತ್ರರಚನೆ ಸಹಿತ ಮಕ್ಕಳ ಸೌಹಾರ್ದ ಕೇಂದ್ರಗಳು ಸಜ್ಜುಗೊಂಡಿವೆ.
ಅಂಬಲತ್ತರ ಪೊಲೀಸ್ ಠಾಣೆಯ ಮಕ್ಕಳ ಸೌಹಾರ್ದ ಕೇಂದ್ರವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಪುಲ್ಲೂರು ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಕೆ.ಅರವಿಂದನ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಸಿ.ಕೆ.ಸಬಿತಾ, ಐಪಿಎಸ್ಎಚ್ ಒ ರಂಜಿತ್ ರವೀಂದ್ರನ್, ಎಸ್ಐ ಕೆ.ವಿ.ಮಧುಸೂದನನ್, ಎಎಸ್ಐ ಟಿ.ದಿನೇಶ್ ಮುಂತಾದವರು ಭಾಗವಹಿಸಿದ್ದರು.
ಕುಂಬಳೆ ಪೊಲೀಸ್ ಠಾಣೆಯ ಮಕ್ಕಳ ಸೌಹಾರ್ದ ಕೇಂದ್ರವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸುಫ್, ಪಂಚಾಯತ್ ಸದಸ್ಯೆ ಪ್ರೇಮಾವತಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾನಗರ ಪೊಲೀಸ್ ಠಾಣೆಯ ಮಕ್ಕಳ ಸೌಹಾರ್ದ ಕೇಂದ್ರ ಮತ್ತು ಸಂದರ್ಶಕರ ಕೊಠಡಿಗಳು ಉದ್ಘಾಟನೆಗೊಂಡವು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.
ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಮಕ್ಕಳ ಸೌಹಾರ್ದ ಕೇಂದ್ರವನ್ನು , ಪೊಲೀಸ್ ಇನ್ ಸ್ಪೆಕ್ಟರ್ ವಿ.ವಿ.ಮನೋಜ್ ಸಂದರ್ಶಕರ ಕೊಠಡಿಯನ್ನು ಉದ್ಘಾಟಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss