Wednesday, August 10, 2022

Latest Posts

ಕಸ ವಿಲೇವಾರಿಗೆ ಜಾಗ ಗುರುತಿಸುವ ಸಂಬಂಧ ಕೊಡಗು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

ಹೊಸ ದಿಗಂತ ವರದಿ, ಮಡಿಕೇರಿ:

ಮಡಿಕೇರಿ ನಗರದ ಕಸ ವಿಲೇವಾರಿಗೆ ಸಂಬಂಧಿಸಿ ಜಾಗ ಗುರುತಿಸುವ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಭೂ ದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ, ಪೌರಾಯುಕ್ತ ರಾಮದಾಸ್, ನಗರಸಭೆಯ ಪರಿಸರ ಎಂಜಿನಿಯರ್ ಪೂರ್ಣಿಮ, ಡಿಯುಡಿಸಿ ಎಂಜಿನಿಯರ್ ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.
ಸಭೆಯ ಆರಂಭದಲ್ಲಿ ಮಾತನಾಡಿದ ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್ ಅವರು, ಎರಡನೇ ಮೊಣ್ಣಂಗೇರಿ ಬಳಿ 10 ಎಕರೆ ಜಾಗ ಗುರುತಿಸಲಾಗಿದೆ. ಹಾಗೆಯೇ ಗಾಳಿಬೀಡು ಬಳಿ ಜಾಗವಿದ್ದು, ಅಲ್ಲಿಯೂ ಸಹ ಪರಿಶೀಲಿಸಲಾಗಿದೆ ಎಂದರು.
ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಅವರು ಕಸ ವಿಲೇವಾರಿ ಸಂಬಂಧಿಸಿದಂತೆ ಎರಡನೇ ಮೊಣ್ಣಂಗೇರಿ ಬಳಿ ಗುರುತಿಸಿರುವ ಜಾಗವು ಡೀಮ್ಡ್ ಅರಣ್ಯ ವ್ಯಾಪ್ತಿಗೆ ಬರಲಿದ್ದು, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಜಾಗ ನೀಡಲು ಬರುವುದಿಲ್ಲ. ಆದರೆ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಡೀಮ್ಡ್ ಅರಣ್ಯ ಪ್ರದೇಶವನ್ನು ಸರ್ಕಾರಿ ಉದ್ದೇಶಕ್ಕೆ ವರ್ಗಾಯಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬಹುದಾಗಿದೆ ಎಂದು ಸಲಹೆ ಮಾಡಿದರು.
ಪೌರಾಯುಕ್ತ ರಾಮದಾಸ್ ಅವರು ಮಾತನಾಡಿ, ಕಸ ವಿಲೇವಾರಿಗೆ 10 ಎಕರೆ ಜಾಗ ಬೇಕಿದ್ದು, ಆ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಎರಡನೇ ಮೊಣ್ಣಂಗೇರಿಯಲ್ಲಿ ಜಾಗ ಗುರುತಿಸಲಾಗಿದ್ದು, ಈ ಸಂಬಂಧ ನಿಯಮಾನುಸಾರ ಅರಣ್ಯ ಇಲಾಖೆ ಜೊತೆ ಸಮನ್ವಯತೆ ಸಾಧಿಸಿ ಜಾಗ ಪಡೆಯಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಬಳಿಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡದೆ ಕಸ ವಿಲೇವಾರಿ ಜಾಗ ಪಡೆಯಲು ನಿಯಮಾನುಸಾರ ಅಗತ್ಯ ಕ್ರಮವಹಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss