ಹೊಸದಿಗಂತ, ಆನ್ಲೈನ್ ಡೆಸ್ಕ್:
ನ್ಯಾಯಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ನನ್ನ ಸ್ಪರ್ಧೆ..-ಇದು ಲೈಂಗಿಕ ದೌರ್ಜನ್ಯಕ್ಕೆ ಈಡಾಗಿ ಆತ್ಮಹತ್ಯೆ ಮಾಡಿಕೊಂಡ ಕೇರಳದ ದಲಿತ ಬಾಲೆಯರಿಬ್ಬರ ತಾಯಿಯ ನುಡಿ. ಮಕ್ಕಳ ಸಾವಿಗೆ ಕಾರಣವಾದ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸದೆ ಅವರ ಸಾವಿಗೆ ನ್ಯಾಯ ಲಭಿಸದೆ ಸಂಕಟ ಅನುಭವಿಸುತ್ತಿರುವ ತಾಯಿ ತನಗೆ ನ್ಯಾಯ ನೀಡದ ಮುಖ್ಯಮಂತ್ರಿ ಪಿಣರಾಯಿ ವಿರುದ್ಧ ಇದೀಗ ಧರ್ಮಾಡಮ್ ವಿಧಾನಸಭಾ ಕ್ಷೇತ್ರದಲ್ಲಿ ಪಿಣರಾಯಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಜನತೆಯಿಂದ ನ್ಯಾಯ ಕೋರಲು ಮುಂದಾಗಿದ್ದಾರೆ.
ಕೇರಳದಲ್ಲಿ ಈ ಬಾರಿ ಇಬ್ಬರು ಮಹಿಳೆಯರ ಚುನಾವಣೆ ಸ್ಪರ್ಧೆ ಗಮನ ಸೆಳೆದಿದ್ದು, ಹಲವು ವೈಚಾರಿಕ ಮತ್ತು ನ್ಯಾಯ ಕುರಿತ ಚರ್ಚೆಗಳಿಗೆ ವೇದಿಕೆ ಒದಗಿಸಿದೆ. ಪಾಲಕ್ಕಾಡ್ ಜಿಲ್ಲೆಯ ವಲಯಾರ್ನಲ್ಲಿ 2017ರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆಗೈದ ದಲಿತ ಬಾಲೆಯರಿಬ್ಬರ ತಾಯಿ ತನ್ನೆಲ್ಲ ಪ್ರತಿಭಟನೆಗಳ ಬಳಿಕ ಇದೀಗ ಮುಖ್ಯಮಂತ್ರಿ ಪಿಣರಾಯಿ ವಿರುದ್ಧ ರ್ಸ್ಪಸುವ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದಾರೆ. ಆ ಬಾಲೆಯರ ಆತ್ಮಹತ್ಯೆ ಬಗ್ಗೆ ಸರಿಯಾಗಿ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ತನಗೆ ನ್ಯಾಯ ಸಿಕ್ಕಿಲ್ಲ . ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸದ ಪೊಲೀಸ್ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಅವರಿಗೆ ಬಡ್ತಿ ನೀಡಿದ ಪಿಣರಾಯಿ ಸರಕಾರದ ವಿರುದ್ಧ ನನ್ನ ಪ್ರತಿಭಟನೆ ಎಂದು ಈ ತಾಯಿ ಹೇಳಿದ್ದಾರೆ.
ಈ ತಾಯಿ ತನ್ನ ಮಕ್ಕಳ ಸಾವಿಗೆ ನ್ಯಾಯ ಕೋರಿ ಅವಿಶ್ರಾಂತ ಹೋರಾಟ ನಡೆಸುತ್ತಿದ್ದು, ಇದೀಗ ಕಾಸರಗೋಡಿನಿಂದ ತಿರುವನಂತಪುರಂನವರೆಗೆ ‘ನೀತಿ ಯಾತ್ರೆ’ ನಡೆಸುತ್ತಿದ್ದಾರೆ. ಜ.26ರಂದು ನ್ಯಾಯ ಲಭಿಸದ ವಿರುದ್ಧ ಕೇಶಮುಂಡನ ನಡೆಸಿ ಪ್ರತಿಭಟನೆಯನ್ನೂ ದಾಖಲಿಸಿದರು. ಇತ್ತೀಚೆಗೆ ನ್ಯಾಯಾಲಯವೇ ಈ ಪ್ರಕರಣದ ಬಗ್ಗೆ ಮರುವಿಚಾರಣೆ ನಡೆಸುವಂತೆ ಆದೇಶಿಸಿದೆ.
ದೇಶದ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ದಲಿತ ಬಾಲೆಯರ ಅತ್ಯಾಚಾರ, ಹತ್ಯೆ ಪ್ರಕರಣಗಳು ರಾಷ್ಟ್ರೀಯ ಮಟ್ಟದ ಸುದ್ದಿಯಾಗುತ್ತಿದ್ದರೂ, ಕೇರಳದ ಈ ದಲಿತ ಬಾಲೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಅವರ ಆತ್ಮಹತ್ಯೆ ಪ್ರಕರಣ ಸುದ್ದಿಯಾಗದಿರಲು ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಇರುವುದೇ ಕಾರಣ. ಕಮ್ಯುನಿಸ್ಟ್ ಆಡಳಿತ ಇರುವ ಕಾರಣ ಮಾಧ್ಯಮಗಳಾಗಲಿ, ಬುದ್ಧಿಜೀವಿಗಳಾಗಲಿ ಈ ಬಗ್ಗೆ ಧ್ವನಿ ಎತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಸಿಎಂ ಪಿಣರಾಯಿ -ಸಿಪಿಎಂ ಫ್ಯಾಸಿಸಂ ವಿರುದ್ಧ ನನ್ನ ಹೋರಾಟ:ಕೆ.ಕೆ.ರೆಮಾ
ಧರ್ಮಾಡಮ್ನಲ್ಲಿ ಪಿಣರಾಯಿ ವಿರುದ್ಧ ದಲಿತ ಬಾಲೆಯರಿಬ್ಬರ ತಾಯಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದರೆ, ಅತ್ತ ಕೋಜಿಕ್ಕೋಡ್ ಜಿಲ್ಲೆಯ ವಡಗರ ಕ್ಷೇತ್ರದಲ್ಲಿ , ಸಿಪಿಎಂ ಗೂಂಡಾಗಳಿಗೆ ಬಲಿಯಾದ ರೆವೊಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ(ಆರ್ಎಂಪಿ)ಸಂಸ್ಥಾಪಕ ಟಿ.ಪಿ.ಚಂದ್ರಶೇಖರನ್ ಅವರ ಪತ್ನಿ ಕೆ.ಕೆ.ರಮಾ ಅವರು ಸ್ಪರ್ಧಿಸಿರುವುದು ಗಮನ ಸೆಳೆದಿದೆ. ಮುಖ್ಯಮಂತ್ರಿ ಪಿಣರಾಯಿ ಮತ್ತು ಸಿಪಿಎಂನ ಫ್ಯಾಸಿಸಂ ವಿರುದ್ಧ ಹೋರಾಟವಾಗಿ ನಾನು ವಡಗರದಿಂದ ಸ್ಪರ್ಧಿಸುತ್ತಿದ್ದೇನೆ ಎಂಬುದಾಗಿ ರಮಾ ಸಾರಿದ್ದಾರೆ.
ಆರ್ಎಂಪಿ ನಾಯಕ ಟಿ.ಪಿ.ಚಂದ್ರಶೇಖರನ್ ಅವರನ್ನು ಸಿಪಿಎಂ ಬೆಂಬಲಿಗರು ಬರ್ಬರವಾಗಿ ಹತ್ಯೆಗೈದಿದ್ದು, ಈ ಹತ್ಯೆಗಾಗಿ ಇನ್ನೂ ನನಗೆ ನ್ಯಾಯ ಲಭಿಸಿಲ್ಲ ಎಂದು ಆರೋಪಿಸಿ ರಮಾ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಿಪಿಎಂನ ರಾಜಕೀಯ ಫ್ಯಾಸಿಸಂ ವಿರುದ್ಧ ತನ್ನ ಹೋರಾಟವನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ.
ನನ್ನ ಸ್ಪರ್ಧೆ ಕೇವಲ ವಡಗರಕ್ಕಾಗಿ ಮಾತ್ರ ಅಲ್ಲ, ಬದಲಿಗೆ ಇಡಿ ರಾಜ್ಯಕ್ಕೇ ಸಂದೇಶ ನೀಡುವಂತಹದ್ದಾಗಿದೆ. ಇದು ಪಿಣರಾಯಿ ವಿಜಯನ್ ಅವರ ರಾಜಕೀಯ ಫ್ಯಾಸಿಸಂ ವಿರುದ್ಧ ಮತ್ತು ಕೇರಳದ ಪ್ರಜಾಸತ್ತಾತ್ಮಕತೆಯನ್ನು ಎತ್ತಿಹಿಡಿಯುವುದಕ್ಕಾಗಿ ಎಂದು ರಮಾ ಹೇಳುತ್ತಾರೆ. ಕೇರಳದಲ್ಲಿ ಪದೆ ಪದೆ ನಡೆಯುತ್ತಿರುವ ರಾಜಕೀಯ ಹತ್ಯೆಗಳನ್ನು ಅವರು ಉಲ್ಲೇಖಿಸಿ ಇಂತಹ ಬರ್ಬರತೆಗಳಿಂದ ಕೇರಳವನ್ನು ಮುಕ್ತಗೊಳಿಸಬೇಕಾಗಿದೆ. ರಾಜಕೀಯ ವಿರೋಧಿಗಳನ್ನು ಹತ್ಯೆಗೈಯ್ಯುವಂತಹ ರಾಜಕೀಯ ದ್ವೇಷ-ಅಸಹಿಷ್ಣುತೆಯಿಂದ ಕೇರಳವನ್ನು ಮುಕ್ತಗೊಳಿಸಿದಾಗಲೇ ಇಂತಹ ಪ್ರಜಾಸತ್ತಾತ್ಮಕತೆಗೆ ಅರ್ಥ ಎಂಬುದಾಗಿ ಅವರು ಹೇಳುತ್ತಾರೆ.
ಪಿಣರಾಯಿ ನೇತೃತ್ವದ ಎಡರಂಗ ನಕಲಿ ಎಡರಂಗ. ಪಿಣರಾಯಿ ಈಗಾಗಲೇ ಎಡರಂಗದ ರಾಜಕೀಯವನ್ನು ಬಂಡವಾಳಶಾಹಿಗಳು ಮತ್ತು ಮಾರುಕಟ್ಟೆ ಶಕ್ತಿಗಳಿಗೆ ಒತ್ತೆ ಇಟ್ಟಿದ್ದಾರೆ.ಪಿಣರಾಯಿ ದರ್ಬಾರಿನಡಿ ಮಾನವೀಯತೆಯು ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಳವಳದಿಂದ ಹೇಳಿದ್ದಾರೆ.