Tuesday, August 16, 2022

Latest Posts

ಡೇರೆ ಮುಕ್ತ ರಾಜ್ಯ ನಿರ್ಮಾಣಕ್ಕೆ ಅಗತ್ಯ ಕ್ರಮ: ಕೆ.ರವೀಂದ್ರ ಶೆಟ್ಟಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಅಲೆಮಾರಿ ಜನಾಂಗದವರು ಹೆಚ್ಚಾಗಿ ಡೇರೆ, ಗುಡಿಸಲುಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತಿದ್ದು, ಇವರಿಗೆ ಸುಸಜ್ಜಿತವಾದ ವಸತಿ
ಸೌಲಭ್ಯವನ್ನು ಕಲ್ಪಿಸಿ ಡೇರೆ (ಟೆಂಟ್) ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ರಾಜ್ಯ ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಜನಾಂಗದವರಿಗಾಗಿ ಸರ್ಕಾರ ಹಾಗೂ ಖಾಸಗಿಯಿಂದ ನಿವೇಶನ ಖರೀದಿಸಿ ಆಶ್ರಯ ಕಾಲೋನಿ ನಿರ್ಮಿಸುವ ಯೋಜನೆ ಇದೆ. ಇದರ ಜೊತೆಗೆ ಸಮುದಾಯದವರ ಕೌಶಲ್ಯಾಭಿವೃದ್ಧಿ ಯೋಜನೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಹಾಗಾಗಿ ಅಲೆಮಾರಿ ಸಮುದಾಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಅಲೆಮಾರಿ ಜನಾಂಗದವರ ಸ್ಥಿತಿಗತಿ, ಜೀವನ ಕ್ರಮ ಶೋಚನೀಯ ಸ್ಥಿತಿಯಲ್ಲಿದೆ. ಹಾಗಾಗಿ ಸರ್ಕಾರದ ಗಮನ ಸೆಳೆಯುವ ಮೂಲಕ ಈ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ನಿಗಮದ ಕಾರ್ಯಚಟುವಟಿಕೆಗಾಗಿ ರಾಜ್ಯ ಬಜೆಟ್‌ನಲ್ಲಿ .250 ಕೋಟಿ ಮೀಸಲಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ಆದಾಗ್ಯೂ ವಸತಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನೆರವು ಹಾಗೂ ಜನಪ್ರತಿನಿಧಿಗಳ ಭೇಟಿ ಮಾಡಿ, ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ನಿಗಮಕ್ಕೆ ಅನುದಾನ ನೀಡಲು ಮನವಿ ಮಾಡಲಾಗಿದ್ದು ಬಿಡುಗಡೆ ಮಾಡುವ ಭರವಸೆ ಇದೆ ಎಂದರು.
ಅಲೆಮಾರಿ ಸಮುದಾಯದವರ ಕಲೆ, ಸಂಸ್ಕೃತಿ, ಆಚಾರ, ವಿಚಾರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. ಮುಖ್ಯವಾಗಿ ಅಲೆಮಾರಿ ಜನಾಂಗದವರ ಮೂಲ ಕಸುಬನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು. ಅಲೆಮಾರಿ ಜನಾಂಗದವರ ಮೂಲ ಕಸುಬು ಸಮಾಜಕ್ಕೆ ಗೊತ್ತಾಗುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಮಾವೇಶ ಏರ್ಪಡಿಸಿ ಮೂಲ ಕಸುಬಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅಲೆಮಾರಿ, ಅರೆಅಲೆಮಾರಿ ಜನಾಂಗದಲ್ಲಿ ಪ್ರವರ್ಗ-1ರಲ್ಲಿ ಬರುವ 46 ಉಪಜಾತಿಗಳಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಗೊಲ್ಲ, ಜೋಗಿ, ಹೆಳವ, ದೊಂಬಿದಾಸ, ಬುಡಬುಡಕಿ ಮತ್ತು ಗೋಸಾಯಿ ಜನಾಂಗದವರು ವಾಸವಾಗಿರುತ್ತಾರೆ. ಈ ಪೈಕಿ ಹೆಚ್ಚಾಗಿ ಗೊಲ್ಲ ಜನಾಂಗದವರು ಇದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಲ ಸೌಲಭ್ಯ ಒದಗಿಸಲಾಗಿರುತ್ತದೆ. ರಾಜ್ಯದಲ್ಲಿ ಸರಿಸುಮಾರು 75 ಲಕ್ಷ ಅಲೆಮಾರಿ ಸಮುದಾಯದವರಿದ್ದಾರೆ ಎಂದರು.
ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎನ್.ಆರ್.ಶೇಖರ್, ಜಿ.ಪಂ. ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಮುಖಂಡ ಪ್ರತಾಪ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss