ಹೊಸ ದಿಗಂತ ವರದಿ, ಮಂಗಳೂರು:
ರಾಜ್ಯದಲ್ಲಿ ಆಕಸ್ಮಿಕ ನೈಸರ್ಗಿಕ ವಿಕೋಪ, ಪ್ರವಾಹ, ಕೋವಿಡ್ನ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅತ್ಯುತ್ತಮ, ಜನಪರ ಯೋಜನೆಗಳ ಮೂಲಕ ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.
ರಾಜ್ಯ ಬಜೆಟ್ನಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ, ಹೊಸ ತೆರಿಗೆ ಪ್ರಸ್ತಾಪ ಇಲ್ಲ. ಎಲ್ಲ ವರ್ಗ, ವಲಯ, ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮಹಿಳಾ ದಿನಾಚರಣೆಯಂದು ಮಂಡಿಸಿರುವ ಬಜೆಟ್ ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ, ಉದ್ಯಮಶೀಲತೆ, ಅಭ್ಯುದಯಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ರಾಜ್ಯ ಬಜೆಟ್ನಲ್ಲಿ ದ.ಕ. ಜಿಲ್ಲೆ ಮತ್ತು ಕರಾವಳಿ ಭಾಗಕ್ಕೂ ಅನೇಕ ಕೊಡುಗೆ ದೊರೆತಿದೆ. ಅಡಿಕೆ ಬೆಳೆಗೆ ಬಾಧಿಸಿರುವ ಹಳದಿ ಎಲೆ ರೋಗದ ಸಂಶೋಧನೆ ಹಾಗೂ ಪರ್ಯಾಯ ಬೆಳೆ ಪ್ರೋತ್ಸಾಹಿಸಲು ೨೫ ಕೋಟಿ ರೂ. ಮೀಸಲಿಡಲಾಗಿದೆ. ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆಯಾಗಲಿದೆ. ಯಾಂತ್ರೀಕೃತ ದೋಣಿಗಳಿಗೆ ೧.೫ ಲಕ್ಷ ಕಿಲೋಲೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್ನಲ್ಲೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮ ವಹಿಸಲಾಗಿದೆ. ೨೦೨೧-೨೨ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ ೬೨ ಕೋಟಿ ರೂ.ಅ ನುದಾನ, ಮಂಗಳೂರು-ಪಣಜಿ ಜಲಸಾರಿಗೆ ಯೋಜನೆಗೆ ೬೦ ಕೋಟಿ ರೂ., ನೇತ್ರಾವತಿ, ಫಲ್ಗುಣಿ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ಕೃಷಿ ವಲಯ, ನೀರಾವರಿ, ಶಿಕ್ಷಣ /ಆರೋಗ್ಯ/ ಇತರ ಅಭಿವೃದ್ಧಿ ವಲಯದ ಅಭಿವೃದ್ಧಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಬಜೆಟ್ ಗಾತ್ರ ೨೪೬೨೦೭ ಕೋಟಿ ರೂ. ಆಗಿದ್ದು, ಕಳೆದ ಬಾರಿಗಿಂತ ೮೩೧೪ ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ಪ್ರತಿಕೂಲ ಪರಿಸ್ಥಿತಿ ನಡುವೆಯೂ ಸಮಾಜದ ಸರ್ವವರ್ಗಗಳ ಹಿತರಕ್ಷಣೆಗೆ ಸ್ಪಂದಿಸುವ ಬಜೆಟ್ ನೀಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ವಕ್ತಾರ ರವಿಶಂಕರ ಮಿಜಾರ್ ಉಪಸ್ಥಿತರಿದ್ದರು.