ಹೊಸ ದಿಗಂತ ವರದಿ, ಕಾಸರಗೋಡು:
ಮೊಗೇರ ಸರ್ವೀಸ್ ಸೊಸೈಟಿಯ ಕಾಸರಗೋಡು ಜಿಲ್ಲಾ ಸಮಿತಿ ಮತ್ತು ಕೇರಳ ರಾಜ್ಯ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಕೇರಳದಲ್ಲಿ ಪ್ರಥಮ ಬಾರಿಗೆ ಮೊಗೇರ ಸಮುದಾಯದವರ ಸಾಮೂಹಿಕ ವಿವಾಹ ಕಾರ್ಯಕ್ರಮವು ಭಾನುವಾರ ಉಪ್ಪಳ ಪಚ್ಲಂಪಾರೆಯ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದ ಧ್ಯಾನ ಮಂದಿರದಲ್ಲಿ ಜರಗಿತು.
ಮೊಗೇರ ಸಮಾಜದ ಪ್ರಥಮ ಸಚಿವರಾದ ಕರ್ನಾಟಕ ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್.ಅಂಗಾರ ಸುಳ್ಯ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಬಾಬು ಯು. ಪಚ್ಲಂಪಾರೆ ಅಧ್ಯಕ್ಷತೆ ವಹಿಸಿದ್ದರು.
ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್, ವಿವಿಧ ವಲಯಗಳ ಪ್ರಮುಖರಾದ ಕೃಷ್ಣಪ್ಪ ಕೋರಿಕ್ಕಾರು, ಲೋಕೇಶ್ ಕೆ.ಕೆ., ಭಾಸ್ಕರನ್, ವಿಜಯ ವಿಕ್ರಮ್ ರಾಮಕುಂಜ, ಬಾಲಕೃಷ್ಣ ಮುಳಿಂಜ, ಸುಂದರ ಯು.ಪಿ., ಕಾರ್ತ್ಯಾಯಿನಿ, ಕೆ.ಕೆ.ಸ್ವಾಮಿಕೃಪಾ ಕನ್ನೆಪ್ಪಾಡಿ, ಐ.ಲಕ್ಷ್ಮಣ ಪೆರಿಯಡ್ಕ , ಗಿರಿಜಾ ತಾರನಾಥ್ ಕುಂಬಳೆ, ಮೋಹನ್ ಮಂಜೇಶ್ವರ, ಮನೋಜ್ ಮಂಜೇಶ್ವರ ಮೊದಲಾದವರು ಭಾಗವಹಿಸಿ ಶುಭ ಕೋರಿದರು.
ಗಣೇಶ್ ಸಿ.ಕೆ. ಪಾಡಿ ಸ್ವಾಗತಿಸಿ, ಕೇಶದ ದೈತೋಟ ಬಾಯಾರು ವಂದಿಸಿದರು. ಆದರ್ಶ್ ಪಟ್ಟತ್ತಮೊಗರು ಕಾರ್ಯಕ್ರಮ ನಿರೂಪಿಸಿದರು. ಕೋವಿಡ್ ಮಾನದಂಡಗಳನ್ನು ಅನುಸರಿಸಿ ಐದು ಜೋಡಿಗಳಿಗೆ ಮಾತ್ರ ಉಚಿತ ವಿವಾಹ ನೆರವೇರಿಸಲಾಯಿತು. ಮೊಗೇರ ಸಂಪ್ರದಾಯದ ಪ್ರಕಾರ ಮದುವೆ ನಡೆಯಿತು. ಇದೇ ಸಂದರ್ಭದಲ್ಲಿ ಮೊಗೇರರ ಸಾಂಪ್ರದಾಯಿಕ, ಜನಪದ ನೃತ್ಯವಾದ ದುಡಿನಲಿಕೆ ಹಾಗೂ ಪಾಡ್ದನ, ಪದರಂಗಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.