ಶಾಂತಿಯುತ ಚುನಾವಣೆಗೆ ಗಡಿ ಭದ್ರತಾ ದಳದ ಯೋಧರ ಬಲ: ಕೋಲಾರದಲ್ಲಿ ಸಿಕ್ಕಿತು ಪುಷ್ಪವೃಷ್ಟಿಯ ಸ್ವಾಗತ!

ಹೊಸದಿಗಂತ ವರದಿ, ಕೋಲಾರ

ಶಾಂತಿಯುತ,ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ದತೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಗರಕ್ಕೆ ಆಗಮಿಸಿರುವ ಗಡಿ ಭದ್ರತಾ ಪಡೆಯ ಯೋಧರ ತಂಡ ಜಿಲ್ಲಾ ಪೊಲೀಸರೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ಮತದಾರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದು, ಯೋಧರಿಗೆ ನಗರದ ಕೆಲವು ರಸ್ತೆಗಳಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿಯ ಸ್ವಾಗತ ಕೋರಿದರು.
ಶಾಂತಿಯುತ ಚುನಾವಣೆ ನಡೆಸಲು ಅಡ್ಡಿಯಾಗುವ ಸಮಾಜವಿದ್ರೋಹಿ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಮೂಲಕ ನ್ಯಾಯಯುತ ಮತದಾನಕ್ಕೆ ಅಡ್ಡಿಪಡಿಸಿದರೆ ಕಠಿಣ ಕ್ರಮದ ಎಚ್ಚರಿಕೆಯ ಸಂದೇಶ ರವಾನಿಸುವಲ್ಲಿ ಗಡಿ ಭದ್ರತಾ ದಳದ ಯೋಧರ ತಂಡ ಯಶಸ್ವಿಯಾಯಿತು.
ಚುನಾವಣಾ ಕಾರ್ಯಕ್ಕೆ ಜಿಲ್ಲೆಗೆ ೫ ಬಿಎಸ್‌ಎಫ್ ಕಂಪನಿಗಳು ಬಂದಿರುವ ಹಿನ್ನೆಲೆಯಲ್ಲಿ, ಬಿಎಸ್‌ಎಫ್ ಹಾಗೂ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಪಥಸಂಚಲನ ನಡೆಸಿದ್ದು, ಜಿಲ್ಲಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ವೆಂಕಟ್‌ರಾಜಾ, ಎಸ್ಪಿ ಎಂ.ನಾರಾಯಣ, ಜಿಪಂ ಸಿಇಒ ಯುಕೇಶ್‌ಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ವಿನಾಯಕ್ ನೇತೃತ್ವ ವಹಿಸಿದ್ದರು.
ನಗರದ ಅರಹಳ್ಳಿ ಗೇಟ್ ಬಳಿಯಿಂದ ಆರಂಭಗೊಂಡ ಪಥಸಂಚಲನವು ಅಮ್ಮವಾರಿಪೇಟೆ ವೃತ್ತ, ಬಸ್ ನಿಲ್ದಾಣ ವೃತ್ತ, ಕ್ಲಾಕ್ ಟವರ್ ಮಾರ್ಗವಾಗಿ ಎಂಜಿ ರಸ್ತೆಗೆ ತಲುಪಿತು. ಪಥಸಂಚಲನಲ್ಲಿ ಭಾಗವಹಿಸಿದ್ದವರಿಗೆ ಕ್ಲಾಕ್ ಟವರ್‌ನಲ್ಲಿ ವಿವಿಧ ಸಂಸ್ಥೆಗಳ ಮುಖಂಡರು ಸ್ವಾಗತಿಸಿದರು. ಎಂಜಿ ರಸ್ತೆಯಲ್ಲಿ ಪುಷ್ಪಾರ್ಚನೆ ಮಾಡಲಾಯಿತು.
ಪಥಸಂಚಲನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಎಂ.ನಾರಾಯಣ, ಮುಂಬರುವ ವಿಧಾನಸಭೆ ಚುನಾವಣೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗೆ ಐದು ಬಿಎಸ್‌ಎಫ್ ಕಂಪನಿಗಳು ಬಂದಿವೆ. ಪ್ರತಿ ಕಂಪನಿಯಲ್ಲಿ ೧೨೦ ಮಂದಿ ಜವಾನರು ಇದ್ದಾರೆ. ಚುನಾವಣೆ ಮುಗಿಯುವವರೆಗೆ ನಮ್ಮ ಅತಿಥಿಗಳಾಗಿ ಇರುತ್ತಾರೆ ಎಂದು ತಿಳಿಸಿದರು.
ಮತದಾರರನ್ನು ತೋಳ್ಬಲ, ಜಾತಿ ಬಲದಿಂದ ಭಯ ಬೀಳಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ನಿರ್ಭಿತೆಯಿಂದ ಮತದಾನ ಮಾಡಬೇಕು. ಯಾವುದೇ ಶಕ್ತಿ ತಡೆಯಬಾರದು. ಶಾಂತಿಯಿಂದ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಈ ಪಡೆಗಳು, ಪೊಲೀಸ್, ಸರಕಾರ ಗಮನ ಇಡುತ್ತವೆ. ಎಲ್ಲಾ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಪಥ ಸಂಚಲನ ನಡೆಸಿದ್ದೇವೆ. ಚುನಾವಣಾ ಅಕ್ರಮ ತಡೆಯುವುದು ನಮ್ಮ ಉದ್ದೇಶ ಎಂದ ಅವರು, ಈಗಾಗಲೇ ಜಿಲ್ಲೆಯಲ್ಲಿ ೨೫ ಚೆಕ್‌ಪೋಸ್ಟ್‌ಗಳು ಇದ್ದು, ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಗೆ ಗಡಿ ಭದ್ರತಾ ದಳ ಬಲ
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕೋಲಾರ ಪೊಲೀಸ್ ಜಿಲ್ಲೆಯಲ್ಲಿ ನಾಲ್ಕು ಹಾಗೂ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಒಂದು ಬಿಎಸ್‌ಎಫ್ ಕಂಪನಿ ಇರಲಿವೆ. ಪೊಲೀಸ್ ಇಲಾಖೆಗೆ ಇದರಿಂದ ಬಲ ಬಂದಿದೆ. ಕಾನೂನುಬದ್ಧವಾಗಿ ಚುನಾವಣೆ ನಡೆಸಲು ಸಹಕಾರ ನೀಡಲಿದ್ದಾರೆ. ಕಮಾಂಡೆಂಟ್ ಕೇಶವ್, ರಾಣಾ ನೇತೃತ್ವದಲ್ಲಿ ಗಡಿ ಭದ್ರತಾ ತಂಡ ಬಂದಿದೆ ಎಂದರು.
ರೂಟ್ ಮಾರ್ಚ್ ನಡೆಸಿದ್ದು, ಮತದಾರರಲ್ಲಿ ಭರವಸೆ ತುಂಬುವ ಕೆಲಸ ಮಾಡುತ್ತಿದ್ದೇವೆ. ಯಾರೂ ಭಯಪಡುವ ಅಗತ್ಯ ಇಲ್ಲ. ಜನರೂ ಬಿಎಸ್‌ಎಫ್ ಪಡೆಗಳಿಗೆ ಸ್ವಾಗತ ಕೋರಿದ್ದಾರೆ. ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲಿದ್ದೇವೆ ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!