Sunday, August 14, 2022

Latest Posts

ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ ಫೋರ್ಡ್‌!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ಪ್ರಸಿದ್ಧ ವಾಹನ ಉತ್ಪಾದನಾ ಕಂಪೆನಿ ಫೋರ್ಡ್​ ಮೋಟಾರ್ಸ್ ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದ್ದು, ಆಮದುಗಳ ಮೂಲಕ ಮಾತ್ರ ಉನ್ನತ ಮಟ್ಟದ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಫೋರ್ಡ್ ಭಾರತದಿಂದ ದೇಶೀಯ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದೆ. ಕಂಪನಿಯು ಇಂದು ತನ್ನ ಗುಜರಾತ್ ಮತ್ತು ಚೆನ್ನೈ (ತಮಿಳುನಾಡು) ಸ್ಥಾವರಗಳಲ್ಲಿ ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುತ್ತಿರುವುದಾಗಿ ಅಧಿಕೃತ ಹೇಳಿಕೆಯನ್ನು ನೀಡಿದೆ.
ಈ ಹಿಂದೆ ಕಂಪನಿಯು ಚೆನ್ನೈ (ತಮಿಳುನಾಡು) ಮತ್ತು ಸನಂದ್ (ಗುಜರಾತ್) ಘಟಕಗಳಲ್ಲಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಕಂಪನಿಯು 2 ಬಿಲಿಯನ್ ಡಾಲರ್​ನಷ್ಟು ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೋರ್ಡ್ ಇಂಡಿಯಾ ತಿಳಿಸಿದೆ.
ಮುಂದಿನ ಒಂದು ವರ್ಷದಲ್ಲಿ, ಈ ಎರಡೂ ಸ್ಥಾವರಗಳಲ್ಲಿ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಕಂಪನಿ ಹೇಳಿದೆ. ಆದಾಗ್ಯೂ, ಕಂಪನಿಯು ವಿದೇಶಗಳಿಗೆ ರಫ್ತು ಮಾಡಲು ಎಂಜಿನ್ ತಯಾರಿಸುವುದನ್ನು ಮುಂದುವರಿಸುತ್ತದೆ.
ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಫೋರ್ಡ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ, ‘ಕಂಪನಿಯು ಕಳೆದ 10 ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿದೆ, ಇದರಿಂದಾಗಿ ಕಂಪನಿಯು 2 ಬಿಲಿಯನ್ ಡಾಲರ್‌ಗಳಷ್ಟು ನಷ್ಟವನ್ನು ಉಂಟುಮಾಡಿದೆ. ಭಾರತದಲ್ಲಿ ಕಂಪನಿಯ ಮಾರಾಟವು ನಿರಂತರವಾಗಿ ಕುಸಿಯುತ್ತಿದೆ. ಮತ್ತು ಕಳೆದ ಕೆಲವು ವರ್ಷಗಳಲ್ಲಿ ಕಾರ್ ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ, ವ್ಯಾಪಾರ ಬೆಳವಣಿಗೆಯ ನಿರೀಕ್ಷೆಯಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ, ಉತ್ಪಾದನೆಯನ್ನು ನಿಲ್ಲಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದರೆ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರಿಸುವುದಾಗಿ ಫೋರ್ಡ್ ಹೇಳಿದೆ. ಫೋರ್ಡ್ ನ ಸೇವಾ ಕೇಂದ್ರಗಳು ಮತ್ತು ಗ್ರಾಹಕ ಬಿಂದುಗಳು ಸ್ಥಗಿತಗೊಂಡ ನಂತರವೂ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸಕಾಲಿಕ ಸೇವೆ ಒದಗಿಸಲು ತೆರೆದಿರುತ್ತವೆ. ಅಷ್ಟೇ ಅಲ್ಲದೆ ಆಮದಿನ ಮೂಲಕ ಭಾರತದಲ್ಲಿ ಫೋರ್ಡ್ ವಾಹನಗಳು ಖರೀದಿಗೆ ಲಭ್ಯವಿರಲಿದೆ.
ಮತ್ತೊಂದೆಡೆ ಎರಡು ಘಟಕಗಳ ಸ್ಥಗಿತದಿಂದ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಏಕೆಂದರೆ ಈ ಎರಡು ಘಟಕಗಳಲ್ಲಿ ಸುಮಾರು 4 ಸಾವಿರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕಂಪೆನಿಯು ಉತ್ಪಾದನೆಯನ್ನು ನಿಲ್ಲಿಸಿದರೆ ಅದು ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದಾಗ್ಯೂ ಫೋರ್ಡ್ ಕಂಪೆನಿಯು ತಮ್ಮ ಉದ್ಯೋಗಿಗಳನ್ನು ಇತರೆ ಪಾಲುದಾರರೊಂದಿಗೆ ಕೆಲಸ ಮಾಡಲು ನೇಮಿಸಲಿದೆ ಎಂದು ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss