ಹೊಸದಿಗಂತ ವರದಿ, ಶಿವಮೊಗ್ಗ:
ತಾಲೂಕಿನ ಚೋರಡಿ ಸಮೀಪದ ಹೊರಬೈಲು ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆಗಳು ದಾಳಿ ಮಾಡಿ ರೈತರು ಬೆಳೆದಿದ್ದ ಫಸಲನ್ನು ನಾಶ ಪಡಿಸಿವೆ.
ಗ್ರಾಮದ ಸುಮಾರು ಐದಾರು ರೈತರ ಹೊಲಗಳಿಗೆ ದಾಳಿ ಮಾಡಿರುವ ಆನೆಗಳು, ಬೆಳೆದು ನಿಂತಿದ್ದ ಫಸಲನ್ನು ಹಾಳು ಮಾಡಿವೆ. ಗ್ರಾಮದ ನಾಗರಾಜ, ಮಂಜುನಾಥ, ಮಂಜಪ್ಪ, ಶಿವಣ್ಣ ಅವರ ಜಮೀನಿನಲ್ಲಿ ದಾಂ‘ಲೆ ಮಾಡಿರುವುದು ಕಂಡುಬಂದಿದೆ. ಇವರುಗಳು ಬೆಳೆದಿದ್ದ ಭತ್ತ, ಕಬ್ಬು, ಬಾಳೆ ಮತ್ತು ತೆಂಗಿನ ಮರಗಳನ್ನು ಪುಡಿ ಮಾಡಿವೆ.
ಅರಸಾಳು ವ್ಯಾಪ್ತಿಯಲ್ಲಿದ್ದವು…
ಕಾಡಾನೆಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಗ್ರಾಮಸ್ಥರಲ್ಲಿ ಭಯ ಆವರಿಸಿದೆ. ಎರಡು ದಿನಗಳ ಹಿಂದೆ ಅರಸಾಳು ಅರಣ್ಯ ವ್ಯಾಪ್ತಿಯ ಕೆಂಚನಾಳ ಗ್ರಾಪಂ ಬಳಿಯ ಮಸರೂರು ಭಾಗದಲ್ಲಿ ಈ ಆನೆಗಳು ರೈತರ ಫಸಲು ನಾಶ ಮಾಡಿದ್ದವು. ಹಾಗೇ ಮುಂದುವರಿದು ಕಾಡಿನ ಮೂಲಕವೇ ಹೊರಬೈಲು ಗ್ರಾಮದ ಕಡೆ ಪ್ರವೇಶ ಮಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಕ್ಕೆ ಚೋರಡಿ ವಲಯ ಅರಣ್ಯಾಧಿಕಾರಿ ಕಚೇರಿ ಸಿಬ್ಬಂದಿ ಭೇಟಿ ನೀಡಿದ್ದರು. ಆನೆ ಅರಣ್ಯದ ಮೂಲಕ ಗಿಳಾಲಗುಂಡಿ ಕಡೆಗೆ ಸಾಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.