ಹೊಸದಿಗಂತ ವರದಿ , ಶಿವಮೊಗ್ಗ:
ಜಿಲ್ಲೆಯಲ್ಲಿ ಅರಣ್ಯ ಭೂಮಿಯನ್ನು ಎಂಪಿಎಂ ಕಾರ್ಖಾನೆಗೆ ಪುನಃ ಗುತ್ತಿಗೆ ನೀಡಿರುವುದನ್ನು ಮರು ಪರಿಶೀಲನೆ ಮಾಡುವಂತೆ ಒತ್ತಾಯಿಸಿ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯೆ ಅನಿತಾಕುಮಾರಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿ, ಮಲೆನಾಡಿನಲ್ಲಿ ಎಂಪಿಎಂಗೆ ಅರಣ್ಯ ಭೂಮಿಯನ್ನು ಪುನಃ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ ಎಂಬ ಮಾಹಿತಿ ಇದೆ. ಅಕೇಶಿಯಾ ನೆಡುತೋಪು ನಿರ್ಮಾಣ ಮಾಡುವುದರಿಂದ ಪಶ್ಚಿಮಘಟ್ಟದ ಜೀವವೈವಿಧ್ಯ ನಾಶವಾಗಲಿದೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಯೋಜನೆಯಡಿ ಅಕೇಶಿಯಾ ಗಿಡಗಳ ನೆಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅರಣ್ಯ ಭೂಮಿ ಗುತ್ತಿಗೆಯನ್ನು ಎಂಪಿಎಂಗೆ ಮತ್ತೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಮಲೆನಾಡಿನ ಪೂರಕವಾಗಿರುವ ಹಾಗೂ ಜೀವಸಂಕುಲಕ್ಕೆ ಅವಶ್ಯವಿರುವ ಹಣ್ಣು ಹಾಗೂ ಇತರೆ ಗಿಡಗಳನ್ನು ನೆಡಲು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿ, ಎಂಪಿಎಂಗೆ ಜಾಗ ನೀಡಿರುವುದು ಸರ್ಕಾರ ತೆಗೆದುಕೊಂಡಿರುವ ನಿರ್ಣಯ. ಅಕೇಶಿಯಾ ಬಗ್ಗೆ ಚರ್ಚೆ ಮಾಡಲು ಮತ್ತೊಂದು ವಿಶೇಷ ಸಭೆ ನಡೆಸುವುದು ಸೂಕ್ತ ಎಂದರು.
ಸದಸ್ಯ ಯೋಗೀಶ್ ಮಾತನಾಡಿ, ಅಕೇಶಿಯಾ ಬೆಳೆಸಾಬರದು ಎಂಬುದಕ್ಕೆ ಇಡೀ ಸಭೆಯ ಸಹಮತ ಇದೆ. ನಿರ್ಧಾರ ಮರುಪರಿಶೀಲನೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳೋಣ ಎಂಬ ಸಲಹೆಗೆ ಸಭೆಯಲ್ಲಿ ಒಮ್ಮತ ಮೂಡಿತು.