Friday, August 19, 2022

Latest Posts

ಮಾನವ ಜೀವ ಉಳಿಸುವ ಜವಾಬ್ದಾರಿ ಅರಣ್ಯಾಧಿಕಾರಿಗಳ ಮೇಲಿದೆ: ಶಿವಕುಮಾರ್ ನಾಣಯ್ಯ

ಹೊಸದಿಗಂತ ವರದಿ, ಕೊಡಗು:

ವನ್ಯಜೀವಿಗಳ ಜೀವದಂತೆ ಮಾನವ ಜೀವಕ್ಕೂ ಬೆಲೆ ಇದೆ; ಪ್ರಾಣಿಗಳ ಜೀವ ಉಳಿಸುವ ಕರ್ತವ್ಯದಂತೆ ಮಾನವ ಜೀವ ಉಳಿಸುವ ಜವಾಬ್ದಾರಿಯನ್ನೂ ಅರಣ್ಯ ಅಧಿಕಾರಿಗಳು ಹೊರಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರದ ಆದೇಶಕ್ಕಾಗಿ ಎದುರು ನೋಡದೆ ಉಪಟಳ ನೀಡುವ ವನ್ಯಜೀವಿಗಳ ವಿರುದ್ಧ ಅಧಿಕಾರಿಗಳೇ ಖುದ್ದು ಕಾನೂನಿನ ಚೌಕಟ್ಟಿನಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ, ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರೋಪಾಯಗಳನ್ನು ಕಂಡು ಕೊಳ್ಳಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹುಡುಕಲು ಅರಣ್ಯ ಅಧಿಕಾರಿಗಳು ಉನ್ನತ ಮಟ್ಟದ ಅಧ್ಯಯನ ನಡೆಸಬೇಕಾಗುತ್ತದೆ. ಆ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸಬೇಕೇ ಹೊರತು ಹುಲಿ ಸೆರೆ ಹಿಡಿಯುವುದು ಅಥವಾ ಕೊಲ್ಲುವುದೊಂದೇ ಪರಿಹಾರವಾಗಬಾರದು. ಇಂದು ಒಂದು ಹುಲಿಯನ್ನು ಸೆರೆ ಹಿಡಿದರೆ ನಾಳೆ ಮತ್ತೊಂದು ಹುಲಿ ಬರಬಹುದು.

ಅವೈಜ್ಞಾನಿಕ ಕ್ರಮಗಳು ಶಾಶ್ವತ ಪರಿಹಾರವಾಗದು ಎಂದು ಅಭಿಪ್ರಾಯಪಟ್ಟಿರುವ ಶಿವಕುಮಾರ್ ನಾಣಯ್ಯ, ಮೊದಲು ಹುಲಿ ದಾಳಿಗೆ ಕಾರಣ ಏನು ಎನ್ನುವುದನ್ನು ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ನಡೆಯುತ್ತಿರುವ ವನ್ಯಜೀವಿ ದಾಳಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ. ಆದರೆ ಪರಿಹಾರವನ್ನು ಅಧಿಕಾರಿಗಳೇ ಸೂಚಿಸಿ ಅನುಮೋದನೆ ಪಡೆಯಬೇಕೇ ಹೊರತು ಸರ್ಕಾರವನ್ನು ದೂಷಿಸಿ ಯಾವುದೇ ಪ್ರಯೋಜನವಿಲ್ಲವೆಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!