ಹೊಸದಿಗಂತ ವರದಿ,ಕಲಬುರಗಿ:
ಭಾರತೀಯ ಜನತಾ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾಯ೯ಕತ೯ರುಗಳ ನಡುವೆ ಇರುವಂತಹ ಎಲ್ಲಾ ರೀತಿಯ ಭಿನ್ನಾಭಿಪ್ರಾಯವನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಾಯ೯ಕತ೯ರಿಗೆ ಕಿವಿ ಮಾತು ಹೇಳಿದರು.
ನಗರದ ಕೆಕೆಸಿಸಿಐ ಸಭಾಂಗಣ ಶನಿವಾರ ಹಮ್ಮಿಕೊಂಡ ಬಿಜೆಪಿ ಜಿಲ್ಲಾ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳ ಹಿಂದೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮುಂಚೆ ನಮ್ಮ ದೇಶದ ಸ್ಥಿತಿ ಹೇಗಿತ್ತು ಇದೀಗ ಹೇಗಿದೆ ಎಂಬುದರ ಬಗ್ಗೆ ಕಲ್ಪಿಸಿಕೊಳ್ಳಿ. ಮತ್ತೊಮ್ಮೆ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಾಗಿದೆ. ನಮ್ಮ ನಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಒಂದಾಗಿ ಲೋಕಸಭೆ ಕ್ಷೇತ್ರ ಗೆಲ್ಲುವತ್ತ ಗಮನ ಹರಿಸೋಣ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್ ಸೇರಿ ಭ್ರಷ್ಟಾಚಾರವನ್ನು ಉಸಿರಾಗಿಸಿಕೊಂಡಿರುವ ಹಲವು ಪಕ್ಷಗಳು ಕಾಯುತ್ತಿವೆ. ಆದರೆ, ನಾವೆಲ್ಲರೂ ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಸಂಸದ ಜಾಧವ್ ಮಾತನಾಡಿ,ನಮ್ಮಲ್ಲಿರುವ ಎಲ್ಲಾ ರೀತಿಯ ವೈಮನಸ್ಸು ಮರೆತು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ. ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಸಕಾ೯ರ ರಚನೆ ಮಾಡುವಲ್ಲಿ ಶಕ್ತಿ ಮೀರಿ ಶ್ರಮಿಸೋಣ ಎಂದು ಹೇಳಿದರು.
ಸಭೆಯಲ್ಲಿ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರ ವಿರುದ್ಧ ಹಲವು ಟೀಕೆ ಟಿಪ್ಪಣೆಗಳ ನಡುವೆ ಮತ್ತೊಮ್ಮೆ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಶಶಿಲ್ ನಮೋಶಿ, ಮುಖಂಡರಾದ ಅಮರಾನಾಥ್ ಪಾಟೀಲ್, ಈಶ್ವರಸಿಂಗ್ ಠಾಕೂರ್, ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ರದ್ದೇವದಾಗಿ, ನಗರದ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಚಂದು ಪಾಟೀಲ್, ಅಶೋಕ್ ಬಗಲಿ, ವಿದ್ಯಾಸಾಗರ ಶಾಬಾದಿ, ಅರುಣ್ ಬಿನ್ನಾಡಿ, ಸದಾನಂದ ಪೆರ್ಲ ಇತರರಿದ್ದರು.