ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ನುಸುಳುಕೋರರನ್ನು ಗುರುತಿಸಿ ಅವರನ್ನು ರಾಜ್ಯದಿಂದ ಹೊರಹಾಕಲು ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಸರಾಯ್‌ಕೆಲಾದಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ನುಸುಳುಕೋರರು ಇಲ್ಲಿನ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳನ್ನು ಮದುವೆಯಾಗಿ, ಭೂಮಿ ಕಬಳಿಸುತ್ತಿದ್ದಾರೆ. ಬುಡಕಟ್ಟು ಮಹಿಳೆಯರನ್ನು ಮದುವೆಯಾಗಿರುವ ನುಸುಳುಕೋರರಿಗೆ ಭೂಮಿ ಸಿಗದಂತೆ ಮಾಡಲು ಕಾನೂನು ತರುತ್ತೇವೆ ಎಂದರು.
ನುಸುಳುಕೋರರ ವಿಷಯವನ್ನು ಎತ್ತಿದ್ದಕ್ಕೆ ಚಂಪೈ ಸೊರೇನ್ ಅವರಿಗೆ ಅವಮಾನ ಮಾಡಲಾಯಿತು. ಮಾತ್ರವಲ್ಲ, ಮುಖ್ಯಮಂತ್ರಿ ಸ್ಥಾನ ತೊರೆಯುವಂತೆ ಅವರ ಮೇಲೆ ಹೇಮಂತ್ ಸೊರೇನ್ ಒತ್ತಡ ಹೇರಿದರು ಎಂದು ವಾಗ್ದಾಳಿ ನಡೆಸಿದರು.
ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಬಾಂಗ್ಲಾದೇಶದ ನುಸುಳುಕೋರರ ರಕ್ಷಣೆಗೆ ನಿಂತಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಕಾಪಾಡುವುದಷ್ಟೇ ಅವರ ಗುರಿ ಎಂದು ಟೀಕಿಸಿದರು.