ಹೊಸ ದಿಗಂತ ವರದಿ, ಮಂಗಳೂರು:
ಹಿಂದು ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಗಾಗಿ ಹಿಂದು ಧಾರ್ಮಿಕ ಕ್ಷೇತ್ರಗಳ ಒಕ್ಕೂಟ ರಚನೆಗೊಂಡಿದ್ದು, ಅದಕ್ಕೆ ಹಿಂದು ಧಾರ್ಮಿಕಕ್ಷೇತ್ರ ಸಂರಕ್ಷಣಾ ಸಮಿತಿ ಎಂದು ಹೆಸರಿಡಲಾಗಿದೆ.
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಬಳಿಯ ವಿಶ್ವ ಹಿಂದು ಪರಿಷತ್ನ ಕಾರ್ಯಾಲಯ ವಿಶ್ವಶ್ರೀಯಲ್ಲಿ ಮಂಗಳವಾರ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಗೋಸ್ಕರ ದೈವಸ್ಥಾನ, ದೇವಸ್ಥಾನ, ಭಜನಾಮಂದಿರಗಳ ಪ್ರಮುಖರ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಸಮಿತಿ ರಚಿಸುವ ಬಗ್ಗೆ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೈವಸ್ಥಾನ, ದೇವಸ್ಥಾನ, ಭಜನಾಮಂದಿರಗಳನ್ನು ಅಪವಿತ್ರಗೊಳಿಸುವ ಸಂಚು ನಡೆಯುತ್ತಿದ್ದು, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ದೈವಸ್ಥಾನ, ದೇವಸ್ಥಾನ, ಭಜನಾಮಂದಿರಗಳನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಸಭೆಯಲ್ಲಿ ೧೦೦ಕ್ಕೂ ಹೆಚ್ಚು ಧಾರ್ಮಿಕ ಕ್ಷೇತ್ರಗಳ ಪ್ರಮುಖರು ಪಾಲ್ಗೊಂಡರು. ಸಮಿತಿ ಮೂಲಕ ಬೇರೆ ಬೇರೆ ಕಾರ್ಯಕ್ರಮಗಳನ್ನು ನಿಶ್ಚಯ ಮಾಡಲಾಯಿತು. ಹಿಂದು ಧಾರ್ಮಿಕಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಪ್ರಮುಖರಾದ ಸುಂದರ್ ಆಚಾರ್ಯ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ರವೀಂದ್ರನಾಥ ರೈ, ಗೌರವ ಸಲಹೆಗಾರರಾಗಿ ಭುಜಂಗ ಶೆಟ್ಟಿ ಜಪ್ಪುಗುಡ್ಡೆಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕಿರಣ್ ಕೊಟ್ಟಾರಿ, ಉಪಾಧ್ಯಕ್ಷರಾಗಿ ರವೀಂದ್ರ ಮಣಿಪಾಡಿ, ಸದಾಶಿವ ಶೆಟ್ಟಿ ಕಾವೂರು, ಬಾಬು ಮಾಡೂರು, ವಸಂತ್ ಕಿಣಿ ಉಳ್ಳಾಲ, ಜಯರಾಮ್ ಶೆಟ್ಟಿ ಇರಾ ಆಯ್ಕೆಗೊಂಡರು.
ವಿಶ್ವಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಸಹ ಸಂಘಚಾಲಕ ಸುನೀಲ್ ಆಚಾರ್, ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಪ್ರಾಂತ ಮಠಮಂದಿರ ಸಂಪರ್ಕ ಪ್ರಮುಖ್ ಪ್ರೇಮಾನಂದ್ ಶೆಟ್ಟಿ , ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳ ವಿಭಾಗ ಸಂಯೋಜಕ್ ಭುಜಂಗ ಕುಲಾಲ್ ಉಪಸ್ಥಿತರಿದ್ದರು