ಹೊಸ ದಿಗಂತ ವರದಿ, ಮೈಸೂರು:
ಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಾಕಾರಣ ಟೀಕಿಸುತ್ತಿರುವ ವಿಪಕ್ಷದವರಿಗೆ ಮತದಾರರು ಉತ್ತರ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ ಸಂಜೆ ಮೈಸೂರಿನ ರಾಜೇಂದ್ರ ಭವನದಲ್ಲಿ ಬಿಜೆಪಿ ಮೈಸೂರು ನಗರ ಮತ್ತು ಗ್ರಾಮಾಂತರ ಘಟಕದಿಂದ ಆಯೋಜಿಸಲಾಗಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವೆಂಕ, ನಾಣಿ, ಸೀನ ಎಂಬುವರು ಪ್ರಧಾನಿ ನರೇಂದ್ರ ಮೋದಿ ಹಾಗೂ ನನ್ನ ಬಗ್ಗೆ ಮನಬಂದoತೆ ಮಾತನಾಡುತ್ತಿದ್ದಾರೆ. ಅವರಿಗೆಲ್ಲಾ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಕ್ಕ ಉತ್ತರವನ್ನು ನಾನು ಹಾಗೂ ಮತದಾರರು ನೀಡುತ್ತೇವೆ. ಬೆಳಗಾವಿ ಅಧಿವೇಶನದಲ್ಲೂ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು. ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಜೆಡಿಎಸ್ ಸೇರಿದಂತೆ ಬೇರೆ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
ಎಲ್ಲಿ ಜೆಡಿಎಸ್ ಸ್ಪರ್ಧಿಸಿಲ್ಲವೋ ಅಲ್ಲಿ ಮಾತ್ರ ಬಿಜೆಪಿ ಗೆ ಬೆಂಬಲ ಕೊಡಿ ಎಂದು ಕೇಳಿದ್ದೇವಷ್ಟೇ.
ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಅಭ್ಯರ್ಥಿ ರಘು ಕೌಟಿಲ್ಯ ಅವರನ್ನು ಸರ್ವಸಮ್ಮತವಾಗಿ ಆಯ್ಕೆ ಮಾಡಿದ್ದೇವೆ.
ಎಲ್ಲಾ ಗ್ರಾಮ ಪಂಚಾಯತಿ ಗಳಿಗೂ ಭೇಟಿ ನೀಡಿರುವ ಮುಖಂಡ ಅಂತಾ ಇದ್ದರೆ, ಅದು ರಘು ಕೌಟಿಲ್ಯ ಮಾತ್ರ.
ಕೊರೋನಾ ಸಮಯದಲ್ಲಿ ವಾರಿಯರ್ಸ್ ಆಗಿ ದುಡಿಯುತ್ತಿದ್ದ ರಘು ಅವರು ಅವರ ಪತ್ನಿಯನ್ನು ಕಳೆದುಕೊಂಡರು.
ಆ ನೋವಿನ ನಡುವೆಯೂ ಜನ ಸೇವೆಯಲ್ಲಿ ತೊಡಗಿಸಿಕೊಂಡರು. ಈ ಬಾರಿಯ ಚುನಾವಣೆಯಲ್ಲಿ ರಘು ಕೌಟಿಲ್ಯ ಅವರನ್ನು ಗೆಲ್ಲಿಸಬೇಕು.
ಅವರ ಹೆಸರಿನ ಮುಂದೆ 1 ಎಂದು ಬರೆಯಬೇಕು. ಚಲಾಯಿಸುವ ಮತ ತಿರಸ್ಕೃತವಾಗದಂತೆ ಎಚ್ಚರಿಕೆಯಿಂದ ಮತ ಚಲಾಯಿಸಬೇಕು.
100 ಕ್ಕೆ 100ರಷ್ಟು ನಾವು 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಹಾಗಾಗಿ ರಘು ಕೌಟಿಲ್ಯ ಕೂಡ ಗೆಲುವು ಸಾಧಿಸಬೇಕು. ರಘು ಕೌಟಿಲ್ಯ ಈಗಾಗಲೇ ಗೆದ್ದಾಗಿದೆ. ಆದರೆ ಮೊದಲ ಪ್ರಾಶಸ್ತ÷್ಯದ ಮತಗಳಲ್ಲೇ ರಘು ಕೌಟಿಲ್ಯ ಗೆಲ್ಲಬೇಕು ಎಂದು ಮತದಾರರಿಗೆ ತಿಳಿಸಿದರು.
ವಿಧಾನಪರಿಷತ್ನಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟವಾದ ಬಹುಮತವಿಲ್ಲ ರಾಜ್ಯ ಸರ್ಕಾರ ಮಂಡಿಸಿದ ಮಸೂದೆಗಳಿಗೆ ಬಹಳ ತೊಂದರೆಯಾಗುತ್ತಿದೆ. ಬಿಲ್ಗಳು ಪಾಸ್ ಆಗುತ್ತಿಲ್ಲ. ಹಾಗಾಗಿ ಪರಿಷತ್ ಚುನಾವಣೆಯಲ್ಲಿ 15ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ದೊರೆತು, ಸರ್ಕಾರ ಮಂಡಿಸಿದ ಬಿಲ್ಗಳು ಪಾಸಾಗಲಿವೆ. ಅದಕ್ಕೆ ಮತದಾರರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಿಎಂ ಕುರ್ಚಿ ಹೋಯಿತು ಎಂದು ಕಣ್ಣೀರು ಹಾಕಲಿಲ್ಲ:
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರ ಮಾಡಿದಾಗ
ಎಲ್ಲ ಶಾಸಕರಿಗೂ, ಮಂತ್ರಿಗಳಿಗೂ ಸಿಹಿ ಊಟ ಹಾಕಿಸಿದೆ. ನಂತರ ರಾಜ್ಯಪಾಲರ ಬಳಿಗೆ ಹೋಗಿ ರಾಜೀನಾಮೆ ಪತ್ರ ಸಲ್ಲಿಸಿದೆ.
ಆಗ ನಾನು ಕಣ್ಣೀರು ಹಾಕಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಲ್ಲ.
ಬದಲಾಗಿ ಅದುವರೆಗೂ ನನ್ನನ್ನು ಅಷ್ಟು ಎತ್ತರಕ್ಕೆ ಏರಿಸಿದ ಜನರ ಪ್ರೀತಿ ನೆನೆದು ಕಣ್ಣೀರು ಹಾಕಿದೆ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ರಾಜ್ಯಾದ್ಯಾಂತ ಪ್ರವಾಸ ಮಾಡುತ್ತೇನೆ :
ನಾನು ಇಷ್ಟಕ್ಕೇ ಸುಮ್ಮನೆ ಕೂರುವುದಿಲ್ಲ.ವಿಧಾನ ಪರಿಷತ್ ಚುನಾವಣೆ ಮುಗಿದ ಕೆಲ ದಿನಗಳ ಬಳಿಕ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಪ್ರತಿ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ. ಯುವ ಮೋರ್ಚಾ, ಮಹಿಳಾ ಮೋರ್ಚಾ, ಎಸ್ಸಿ, ಎಸ್ಟಿ ಮೋರ್ಚಾಗಳನ್ನು ಸಂಘಟನೆ ಮಾಡಿ ಬಲಪಡಿಸುತ್ತೇನೆ. ಮುಖಂಡರ ಸಭೆಗಳನ್ನು ನಡೆಸಿ, ಪಕ್ಷದ ಬಲವರ್ಧನೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಂತೆ ಮಾಡುತ್ತೇನೆ. ನಾವೆಲ್ಲರೂ ಒಂದೇ ದೋಣಿಯಲ್ಲಿ ಸಾಗುವ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.