ಹೊಸದಿಗಂತ ಡಿಜಿಟಲ್ ಡೆಸ್ಕ್
ಗಂಗೆಯನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಲು ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಗಂಗಾ ನದಿಯಿಂದ ಕೆಸರನ್ನು ಹೊರತೆಗೆದು ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದರೊಂದಿಗೆ ರಾಸಾಯನಿಕಗಳು ನದಿಗೆ ಸೇರದಂತೆ ತಡೆಗಟ್ಟಲೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ರಾಷ್ಟ್ರೀಯ ಸ್ವಚ್ಛ ಗಂಗಾ ಯೋಜನೆ ಪ್ರಧಾನ ನಿರ್ದೇಶಕ ಅಶೋಕ್ ಕುಮಾರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಗಂಗಾ ನದಿಯ ಕೆಸರಿನ ನಿರ್ವಹಣೆಯ ಕಳೆದ ಎರಡು ವಾರಗಳಿಂದ ಹಲವಾರು ಚರ್ಚೆಗಳನ್ನು ನಡೆಸಲಾಗಿದೆ. ಗಂಗಾ ನದಿಯಲ್ಲಿನ ಕೆಸರನ್ನು ಸಂಸ್ಕರಿಸಿ ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಅದನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಕೆಸರಿನಲ್ಲಿ ಫಾಸ್ಫರಸ್ ಮತ್ತು ಬೆಳೆಗಳಿಗೆ ಅಗತ್ಯವಾದ ಫೌಷ್ಟಿಕಾಂಶಗಳು ಹೇರಳವಾಗಿದ್ದು, ಸಾವಯವ ಕೃಷಿಗೆ ಪೂರಕವಾಗಿರುತ್ತದೆ. ಆದ್ದರಿಂದ ಗಂಗೆಯ ಒಡಲಿನಲ್ಲಿರುವ ಕೆಸರನ್ನು ಹೊರತೆಗೆದು ರಸಗೊಬ್ಬರವಾಗಿ ಪರಿವರ್ತಿಸಿ, ರೈತರಿಗೆ ಒದಗಿಸುವ ಸಂಬಂಧ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದಲ್ಲಿ ಗಂಗೆ ಸಂಪೂರ್ಣ ಶುದ್ಧಿಗೊಳ್ಳುವುದಲ್ಲದೆ ಕೃಷಿ ಕ್ಷೇತ್ರಕ್ಕೂ ಸಾಕಷ್ಟು ಅನುಕೂಲದಾಯಕವಾಗಲಿದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ