ಗ್ಯಾಸ್ ಸಿಲಿಂಡರ್ ಸ್ಫೋಟ, ಮನೆ ಮೇಲ್ಛಾವಣಿ ಕುಸಿದು ನಾಲ್ವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶನಿವಾರ ಬೆಳಗಿನ ಜಾವ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಗ್ಯಾಸ್ ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಆರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಈ ಪೈಕಿ ನಾಲ್ವರು ಅವಶೇಷಗಳಡಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಅನಂತಪುರ ಜಿಲ್ಲೆಯ ಶೆಟ್ಟೂರು ವಲಯದ ಮುಳಕಲೇಡು ಎಂಬಲ್ಲಿ ಈ ದಾರುಣ ಘಟನೆ ನಡೆದಿದೆ. ಮನೆಯೊಂದರಲ್ಲಿ ಕುಟುಂಬ ಸದಸ್ಯರು ಗಾಢ ನಿದ್ದೆಯಲ್ಲಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಜೈನುಬಿ (60), ದಾದು (35), ಶರ್ಫುನಾ (30) ಮತ್ತು ಫಿರ್ದೋಜ್ (6) ಮೃತಪಟ್ಟಿದ್ದಾರೆ. ಭಾರೀ ಸದ್ದು ಕೇಳಿ ಬಂದ ಹಿನ್ನೆಲೆ ನೆರೆ-ಹೊರೆಯವರು ಸ್ಥಳಕ್ಕಾಗಮಿಸುವ ಹೊತ್ತಿಗಾಗಲೇ ಮನೆಯ ಮೇಲ್ಛಾವಣಿಯಲ್ಲಿ ದಟ್ಟ ಹೊಗೆ ಆವರಿಸಿದೆ. ಗ್ರಾಮಸ್ಥರು ಕೂಡಲೇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅವಶೇಷಗಳಡಿಯಲ್ಲಿ ಸಿಲುಕಿದ್ದವರನನು ಹೊರತೆಗೆದಿದ್ದಾರೆ.

ಗಾಯಾಳುಗಳ ಸ್ಥಿತಿ ಕೂಡ ವಿಷಮವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗ್ರಾಮದಲ್ಲೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!