ಹೊಸದಿಗಂತ ವರದಿ, ಮಡಿಕೇರಿ
ಕಾಫಿ ಬೆಳೆಗಾರರ 10 ಹೆಚ್.ಪಿ.ವರೆಗಿನ ಪಂಪ್ ಸೆಟ್’ಗಳಿಗೆ ಉಚಿತ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡುವ ವಿಷಯ ಸರ್ಕಾರದ ಪರಿಶೀಲನೆಯ ಹಂತದಲ್ಲಿದ್ದು, ಶೀಘ್ರವೇ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಶ್ನೆ ಉತ್ತರಿಸಿದ ಅವರು, ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಜಕಾತಿ ಆದೇಶಾನುಸಾರ ಖಾಸಗಿ ತೋಟಗಾರಿಕೆ ನರ್ಸರಿಗಳು, ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್’ಗಳನ್ನು ಹೊರತುಪಡಿಸಿ ಉಳಿದ ರೈತರ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯವಿರುವ ಪಂಪ್ ಸೆಟ್‌ಗಳಿಗೆ ಮಾತ್ರ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ಹೊರೆಯನ್ನು ಹೊಂದಿರುವ ಕಾಫಿ ಬೆಳೆಗಾರರ ಪ್ರತಿ
ಹೆಚ್.ಪಿ ಗೆ ಮಾಸಿಕ ನಿಗದಿತ ಶುಲ್ಕ ರೂ.80 ಹಾಗೂ ಪ್ರತಿ ಯೂನಿಟ್ ಬಳಕೆಗೆ ರೂ. 3.85 ಶುಲ್ಕವನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿಗದಿಪಡಿಸಿದ್ದು, ಈ ಪ್ರವರ್ಗದ ವಿದ್ಯುತ್ ಗ್ರಾಹಕರುಗಳ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡುವ ವಿಷಯ ಸರ್ಕಾರದ ಪರಿಶೀಲನೆಯ ಹಂತದಲ್ಲಿದೆ. ಅಂತಿಮ ನಿರ್ಣಯ ಇನ್ನಷ್ಟೇ ಕೈಗೊಳ್ಳಬೇಕಾಗಿರುತ್ತದೆ ಎಂದು ಸಚಿವರು ವಿವರಿಸಿದರು.
ಇದಕ್ಕೂ ಮುನ್ನ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದಾಗಿ ರೈತರು ಭೂಮಿ ನಷ್ಟ, ಬೆಳೆ ನಷ್ಟ ಹೊಂದಿದ್ದಲ್ಲದೆ, ಕಾಫಿ ಬೆಳೆಯುವ ರೈತರು ವರ್ಷದಲ್ಲಿ ಕೇವಲ ಒಂದು ತಿಂಗಳು ಮಾತ್ರ ಗಿಡಗಳಿಗೆ ನೀರು ಹಾಯಿಸುತ್ತಿರುವುದರಿಂದ ಇವರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಗಮನಸೆಳೆದರು.
ಸೆಸ್ಕ್ ಕಚೇರಿಗೆ ಬೆಳೆಗಾರರ ಮುತ್ತಿಗೆ: ಈ ನಡುವೆ 10ಹೆಚ್.ಪಿ.ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡದ ಕ್ರಮವನ್ನು ವಿರೋಧಿಸಿ ಕಾಫಿ ಬೆಳೆಗಾರರು ಸೋಮವಾರ ಮಡಿಕೇರಿಯ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬೇರೆ ಜಿಲ್ಲೆಗಳಲ್ಲಿ ರೈತರ ಪಂಪ್ ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ಕೊಡಗು ಜಿಲ್ಲೆಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಉಚಿತ ವಿದ್ಯುತ್ ಭರವಸೆ ನೀಡಿದ್ದರೂ, ಸೆಸ್ಕ್ ಮಾತ್ರ ವಿದ್ಯುತ್ ನೀಡುತ್ತಿಲ್ಲ ಎಂದು ನಿಗಮದ ವಿರುದ್ಧ ಕಾಫಿ ಬೆಳೆಗಾರರು ಕಿಡಿಕಾರಿದರು.
ಸೆಸ್ಕ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅಶೋಕ್’ಗೆ ಮುತ್ತಿಗೆ ಹಾಕಿರುವ ರೈತರು, ಕಚೇರಿ ಒಳ ಪ್ರವೇಶಿಸಲು ನಿರ್ಬಂಧ ವ್ಯಕ್ತಪಡಿಸಿದರು. ಅಲ್ಲದೆ ಮೈಸೂರಿನಿಂದ ಅಧೀಕ್ಷಕ ಇಂಜಿನಿಯರ್ ಮಡಿಕೇರಿಗೆ ಬರಬೇಕೆಂದು ಪಟ್ಟು ಹಿಡಿದ ಬೆಳೆಗಾರರು ಪ್ರತಿಭಟನೆ ಮುಂದುವರಿಸಿದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ