ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರ ಸಾರಿಗೆ ಬಸ್‌ಗಳ ದರ ಹೆಚ್ಚಳಕ್ಕೆ ಮುಂದಾಗಿದೆ. ಇಂದು (ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಶೇ 15 ರಷ್ಟು ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಒಂದೆಡೆ ಮಹಿಳೆಯರಿಗೆ ಶಕ್ತಿ ಯೋಜನೆಯ ಹೆಸರನಿನಲ್ಲಿ ಉಚಿತ ಬಸ್ ಪ್ರಯಾಣ ಒದಗಿಸಲಾಗಿದೆ. ಇನ್ನೊಂದೆಡೆ ಪುರುಷರ ಜೇಬಿಗೆ ಕತ್ತರಿ ಹಾಕುವುದಕ್ಕೂ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಬಸ್‌ಗಳ ದರವನ್ನು ಶೇ 15 ರಷ್ಟು ಹೆಚ್ಚಳ ಮಾಡಲಾಗಿದೆ.
ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ವಿಜಯೇಂದ್ರ ಸರ್ಕಾರದ ವಿರುದ್ಧ ಹೋರಾಟ ಎಚ್ಚರಿಕೆ ನೀಡಿದ್ದಾರೆ.
ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿರುವ ಬಿವೈ ವಿಜಯೇಂದ್ರ , ಯಾವ ಮುಖವಿಟ್ಟುಕೊಂಡು ನೀವು ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೀರಿ.? ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲವಾಗಿರುವ ನೀವು, ಸಾರಿಗೆ ಸಂಸ್ಥೆ ನಷ್ಟದ ಹಾದಿ ತುಳಿಯಲು ಕಾರಣರಾಗಿದ್ದೀರಿ. ಮಹಿಳೆಯರಿಗೆ ಉಚಿತ ಪ್ರಯಾಣ ಪುರುಷರಿಗೆ ಅದರ ಹೊರೆ ಖಚಿತ ಎಂದು ವ್ಯಂಗ್ಯವಾಡಿದ್ದಾರೆ.