Wednesday, July 6, 2022

Latest Posts

ಉಚಿತ ಲಸಿಕೆ: ಪ್ರಧಾನಿ ಘೋಷಣೆಗೆ ರಾಜ್ಯ ಮುಖ್ಯಮಂತ್ರಿಗಳ ಸ್ವಾಗತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ನಿರೋಧಕ ಲಸಿಕೆ ನೀಡಿಕೆಯ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತು ಜನರಿಗೆ ಉಚಿತ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿರುವುದನ್ನು ಬಿಜೆಪಿ ಮುಖ್ಯಮಂತ್ರಿಗಳಲ್ಲದೆ ಹಲವು ವಿಪಕ್ಷ ಸರಕಾರಗಳ ಮುಖ್ಯಮಂತ್ರಿಗಳು ಸ್ವಾಗತಿಸಿ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ.
ಪ್ರಧಾನಿ ಮೋದಿಯವರು ಮಾಡಿದ ಘೋಷಣೆಯಿಂದ, ಲಸಿಕೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿಸಲು ಸಮಸ್ಯೆಗಳನ್ನು ಎದುರಿಸುತ್ತಿದ್ದ ಪಂಜಾಬ್ ಮತ್ತಿತರ ರಾಜ್ಯಗಳಿಗೆ ನೆರವಾಗಿದ್ದು, ಇದಕ್ಕಾಗಿ ಪ್ರಧಾನಿ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ ಎಂಬುದಾಗಿ ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಹೇಳಿದ್ದಾರೆ.
ಪ್ರತಿಯೊಂದು ಜೀವವೂ ಅಮೂಲ್ಯ. ಪ್ರತಿಯೊಬ್ಬರಿಗೂ ಲಸಿಕೆ ಹಾಕುವವರೆಗೆ ಯಾರೂ ಸುರಕ್ಷಿತರಲ್ಲ. ಒಂದು ದೇಶವಾಗಿ ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಒಂದಾಗಿ ನಿಲ್ಲಬೇಕು. ಕೋವಿಡ್ ಲಸಿಕೆ ಅಭಿಯಾನವನ್ನು ರಾಷ್ಟ್ರೀಯ ಅಭಿಯಾನವನ್ನಾಗಿ ಘೋಷಿಸಿದ ಪ್ರಧಾನಿ ಮೋದಿಯವರಿಗೆ ನಾನು ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂಬುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ನಿರ್ಧಾರ ಅತ್ಯಂತ ಶ್ಲಾಘನೀಯ. ಇದು ಕೊರೋನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಮಗೆ ಗೆಲ್ಲಲು ನೆರವಾಗಲಿದೆ. ಇದಕ್ಕಾಗಿ ಪ್ರಧಾನಿಯವರಿಗೆ ನನ್ನ ಅಭಿನಂದನೆ ಎಂಬುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಗೌರವಾನ್ವಿತ ಪ್ರಧಾನಿಯವರು ಕೋವಿಡ್ ನಿರೋಧಕ ಲಸಿಕೆಯನ್ನು ಎಲ್ಲ ರಾಜ್ಯಗಳ ಜನತೆಗೂ ಜೂ.21ರಿಂದ ಉಚಿತವಾಗಿ ಪೂರೈಸಲಾಗುವುದು ಎಂದು ಪ್ರಕಟಿಸಿದ್ದು, ಇದು ಇಂದಿನ ಸಮಯದಲ್ಲಿ ಅತ್ಯಂತ ಸೂಕ್ತ ಸ್ಪಂದನವಾಗಿದೆ. ನಮ್ಮ ಕೋರಿಕೆಗೆ ಧನಾತ್ಮಕವಾಗಿ ಸ್ಪಂದಿಸಿದ ಪ್ರಧಾನಿಯವರ ನಿಲುವಿನಿಂದ ನಾನು ಸಂಸತಗೊಂಡಿದ್ದೇನೆ ಎಂಬುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ.
ಆದರೆ ಅವರ ಸಿಪಿಎಂ ಪಕ್ಷದ ಕಾರ್ಯದರ್ಶಿ ಸೀತಾರಾಮ್‌ಯೆಚೂರಿ ಅವರು, ಕೇಂದ್ರ ಅಸ್ಪಷ್ಟವಾದ ತಾರತಮ್ಯದಿಂದ ಕೂಡಿದ ಲಸಿಕೆ ನೀತಿಯನ್ನು ರಾಜ್ಯಗಳ ತಲೆಗೆ ಕಟ್ಟಲು ಯತ್ನಿಸಿದೆ. ಇದು ಸುಪ್ರೀಂಕೋರ್ಟಿಗೆ ಹೆದರಿ ಪ್ರಧಾನಿ ಮೋದಿಯವರು ಕೈಗೊಂಡ ಕ್ರಮ ಎಂದು ಟೀಕಿಸಿದರು.
ಕೇಂದ್ರ ಸರಕಾರವೇ ಶೇ.75ರಷ್ಟು ಲಸಿಕೆಯನ್ನು ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡುವ ನಿರ್ಧಾರ ತಳೆದಿರುವುದನ್ನು ತಾನು ಸ್ವಾಗತಿಸುವುದಾಗಿ ಮತ್ತು ನಿರ್ಧಾರ ಬದಲಿಸಿರುವುದಕ್ಕಾಗಿ ಪ್ರಧಾನಿಯವರನ್ನು ಅಭಿನಂದಿಸುವುದಾಗಿ ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಪ್ರತಿಕ್ರಿಯಿಸಿದ್ದಾರೆ. ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಸಾರ್ವಜನಿಕ ಭಾವನೆಗಳಿಗೆ ಗಮನ ನೀಡಿದ ಪ್ರಧಾನಿಯವರು ತಮ್ಮ ಹಿಂದಿನ ನಿರ್ಧಾರವನ್ನು ಬದಲಿಸಿರುವುದಕ್ಕಾಗಿ ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಮೋದಿ ಸರಕಾರವು ಸುಪ್ರೀಂಕೋರ್ಟಿನ ಮಧ್ಯಪ್ರವೇಶದ ಬಳಿಕ ಇಂತಹ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಆದ್ದರಿಂದ ಇದರ ಕೀರ್ತಿ ಸುಪ್ರೀಂಕೋರ್ಟಿಗೆ ಸಂದಬೇಕು ಎಂದಿದ್ದಾರೆ.ಮಮತಾ ಬ್ಯಾನರ್ಜಿ ಅವರು ತಾನು ನಾಲ್ಕು ತಿಂಗಳ ಹಿಂದೆಯೇ ಮಾಡಿದ್ದ ಬೇಡಿಕೆಯನ್ನು ಈಗಲಾದರೂ ಪ್ರಧಾನಿಯವರು ಆಲಿಸಿದ್ದಾರೆ.ಮೊದಲೇ ಇಂತಹ ನಿರ್ಧಾರ ತೆಗೆದುಕೊಂಡಿದ್ದರೆ ಸಾವಿರಾರು ಜನರ ಜೀವ ಉಳಿಯುತ್ತಿತ್ತು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
೧೮ರಿಂದ ೪೪ವರ್ಷದವರಿಗೆ ಲಸಿಕೆ ನೀಡುವುದಕ್ಕಾಗಿ ಲಸಿಕೆ ಖರೀದಿಗೆ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ ಅನೇಕ ರಾಜ್ಯಗಳಿಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿದ ಪ್ರಧಾನಿ ಮೋದಿಯವರಿಗೆ ನಾವು ಆಭಾರಿಗಳು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದು ಮೋದಿ ಸರಕಾರದ ಜನಸ್ಪಂದನ ಮತ್ತು ಜನತೆಗಾಗಿ ಇರುವ ಬದ್ಧತೆಗೆ ಸಾಕ್ಷಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಯವರು, ಇದರ ಕೀರ್ತಿ ಸುಪ್ರೀಂಕೋರ್ಟಿಗೆ ಸಲ್ಲಬೇಕು ಎಂದಿದ್ದಾರೆ. ಅಲ್ಲದೆ ಜನತೆಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಧಾನಿಯವರು ಹೇಳಿದ್ದರೂ,ಖಾಸಗಿ ಆಸ್ಪತ್ರೆಗಳು ಇನ್ನೂ ಯಾಕೆ ಲಸಿಕೆಯನ್ನು ಹಣ ಪಡೆದು ನೀಡುತ್ತಿದ್ದಾರೆ ಎಂದು ತಕರಾರೆತ್ತಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss