ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಮಂಗಳೂರು:
ಬಹರೇನ್ ದೇಶದಿಂದ ನಿರೀಕ್ಷಿಸಲಾಗಿದ್ದ ಆಮ್ಲಜನಕ ಸಕಾಲಿಕವಾಗಿ ಭಾರತಕ್ಕೆ ಬಂದಿಳಿದಿದೆ. 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ಪಣಂಬೂರಿನ ನವಮಂಗಳೂರು ಬಂದರು ತಲುಪಿದೆ.
ಭಾರತ ಮತ್ತು ಬಹರೇನ್ ದೇಶಗಳ ನಡುವಿನ ಒಡಂಬಡಿಕೆಯ ಅನ್ವಯ ಸಮುದ್ರ ಸೇತು ಯೋಜನೆಯ ಅಡಿಯಲ್ಲಿ ಭಾರತೀಯ ತಟ ರಕ್ಷಣಾ ಪಡೆಯ ಐಎನ್ಎಸ್ ತಲ್ವಾರ್ ಹಡಗು ಆಕ್ಸಿಜನ್ ಟ್ಯಾಂಕರನ್ನು ಹೊತ್ತು ತಂದಿದೆ. 20 ಮೆಟ್ರಿಕ್ ಟನ್ ತೂಕದ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳನ್ನು ಹಡಗಿನಲ್ಲಿ ತರಲಾಗಿದೆ. ಅದು ಬುಧವಾರ ಮಧ್ಯಾಹ್ನದ ವೇಳೆಗೆ ನವಮಂಗಳೂರು ಬಂದರು ಪ್ರವೇಶಿಸಿದೆ.
ಆಮ್ಲಜನಕ ಹೊತ್ತ ಹಡಗು ಎನ್ಎಂಪಿಟಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬಂದರಿನಲ್ಲಿ ಇತರ ಹಡಗುಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಬಂದರಿನ ಶಿಪ್ಪಿಂಗ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ಸರಕು ನಿರ್ವಹಣೆಯ ಕ್ರೇನ್ಗಳನ್ನು ಆಕ್ಸಿಜನ್ ಟ್ಯಾಂಕರ್ಗಳನ್ನು ಇಳಿಸಲು ಬಳಸಿಕೊಳ್ಳಲಾಯಿತು.
ಕೋವಿಡ್ ಎರಡನೆಯ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ನೂರಾರು ರೋಗಿಗಳು ಭಾರತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಯುಎಇ, ಸೌದಿ ಅರೇಬಿಯಾ ಮೊದಲಾದ ರಾಷ್ಟ್ರಗಳು ಈಗಾಗಲೇ ಆಕ್ಸಿಜನ್ ನೆರವು ನೀಡಿವೆ. ಇದೀಗ ಬಹರೇನ್ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಕಳುಹಿಸಿ ಕೊಟ್ಟಿದೆ.
ಕೇಂದ್ರ ಸರಕಾರದ ಯೋಜನೆಯಂತೆ ಮಂಗಳೂರು ಬಂದರು ಮೂಲಕ ಬಹರೇನ್ನಿಂದ ಲಿಕ್ವಿಡ್ ಆಮ್ಲಜನಕ ತಲುಪಿದೆ. ರಾಜ್ಯ ಸರಕಾರದ ನಿರ್ದೇಶನದಂತೆ ಅದನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
NMPT handles Navy vessel “INS TALWAR” carrying 40 Metric Tonnes Liquid Medical Oxygen filled in cryogenic containers. The above medical oxygen is donated by the Govt. of Kingdom of Bahrain to Indian Red Cross Society to overcome the current pandemic situation in the Country. pic.twitter.com/rlF4nkBUwj
— New Mangalore Port Trust (@NewMngPort) May 5, 2021