PFI ಮೇಲಿನ ದಾಳಿ ವೇಳೆ ಸಿಕ್ಕಿತ್ತು ಸ್ಫೋಟಕ ದಾಖಲೆ: ಸಂಘಟನೆ ಬ್ಯಾನ್‌ಗೆ ಕಾರಣವಾದ ಅಂಶಗಳೇನು? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ 8 ಸಹಚರ ಸಂಸ್ಥೆಗಳನ್ನು ʼಬ್ಯಾನ್‌ʼ ಮಾಡಲಾಗಿದೆ ಎಂದು ಕೇಂದ್ರವು ಘೋಷಿಸಿದೆ. ಈ ಘೋಷಣೆಯಾದ ಕೆಲವೇ ಗಂಟೆಗಳ ಬಳಿಕ, ಪಿಎಫ್‌ಐ ಘಟಕಗಳ ಮೇಲೆ ದೇಶಾದ್ಯಂತ ನಡೆಸಿದ ದಾಳಿ ವೇಳೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಘಟನೆ ಸಿದ್ಧತೆ ನಡೆಸಿದ್ದ ಬಗ್ಗೆ ಸ್ಫೋಟಕ ದಾಖಲೆಗಳು ಸಿಕ್ಕಿವೆ ಎಂದು ತನಿಖಾ ಸಂಸ್ಥೆಗಳು ಬಹಿರಂಗ ಪಡಿಸಿವೆ.
ಐನ್‌ಐಎ ದಾಳಿವೇಳೆ ಸಿಕ್ಕ ಪ್ರಬಲ ಸಾಕ್ಷ್ಯಗಳೇ ಪಿಎಫ್‌ ಐ ಸಂಘಟನೆ ಬ್ಯಾನ್‌ ಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ತನಿಖಾ ಸಂಸ್ಥೆಗಳ ದಾಳಿ ವೇಳೆ ಸಿಕ್ಕ ಸ್ಫೋಟಕ ದಾಖಲೆಗಳೇನು?
ಕೇಂದ್ರದ ತನಿಖಾ ಸಂಸ್ಥೆಗಳು ಒಂಚೂರು ಸುಳಿವನ್ನು ಬಿಟ್ಟುಕೊಡದೆ ಸಂಘಟನೆಯ ಘಟಕಗಳ ಮೇಲೆ 2 ಬಾರಿ ಹಠಾತ್ ದಾಳಿ ನಡೆಸಿ ನೂರಾರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದವು. ಈ ವೇಳೆ ಪಿಎಫ್‌ ಸಂಘಟನೆಯ ವಿಧ್ವಂಸಕ ಚಟುವಟಿಕೆಗಳು, ತೆರೆಮರೆಯಲ್ಲಿ ಸಂಘಟನೆ ನಡೆಸುತ್ತಿದ್ದ ತಯಾರಿಗಳು, ಭಯೋತ್ಪಾದನೆಗೆ ಬೆಂಬಲ ಮೊದಲಾದ ವಿಚಾರಗಳ ಕುರಿತಾಗಿ ಸಾಕ್ಷ್ಯಗಳು ಲಭ್ಯವಾಗಿವೆ.
ಉತ್ತರ ಪ್ರದೇಶದ ಬಾರಾಬಂಕಿಯ ಪಿಎಫ್‌ಐ ಮುಖಂಡ ಮೊಹಮ್ಮದ್ ನದೀಮ್‌ ಮನೆ ಮೇಲೆ ದಾಳಿ ನಡೆಸಿದ್ದ ವೇಳೆ ‘ಬಾಂಬ್‌ ತಯಾರಿಕೆʼಯ ಕುರಿತಾಗಿ ಮಾಹಿತಿ ಹಾಗೂ ಕೈಪಿಡಿಯನ್ನು ವಶಕ್ಕೆ ಪಡೆಯಲಾಗಿದೆ. ‘ಸುಲಭವಾಗಿ ಲಭ್ಯವಿರುವ ವಸ್ತುಗಳನ್ನುʼ ಬಳಸಿಕೊಂಡು ಐಇಡಿ (ಸುಧಾರಿತ ಸ್ಫೋಟಕ) ಹೇಗೆ ತಯಾರಿಸುವುದು ಎಂಬುದರ ಕುರಿತು ಸಂಘಟನೆಯ ಸದಸ್ಯರಿಗೆ ತರಬೇತಿ ನೀಡುತ್ತಿದ್ದ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಹಲವಾರು ‘ದೋಷಪೂರಿತ’ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆಗಳು ಬಹಿರಂಗಪಡಿಸಿವೆ.
ತಮಿಳುನಾಡಿನ ರಾಮನಾಡ್ ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜಿಲ್ಲಾ ಅಧ್ಯಕ್ಷ ಬರ್ಕತುಲ್ಲಾ ಅವರ ನಿವಾಸದಿಂದ 2 ಲೋರೆನ್ಸ್ LHR-80 (ವಿಧ್ವಂಸಕ ಕೃತ್ಯಗಳ ವೇಳೆ ಬಳಕೆಯಾಗಬಲ್ಲ VHF ರೇಡಿಯೋ ಅಂತರ್ನಿರ್ಮಿತ GPS ರಿಸೀವರ್) ಅನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿರುವ ಪಿಎಫ್‌ಐ ಮುಖಂಡ ಶಾಹಿದ್ ಖಾನ್ ಅವರ ನಿವಾಸದಿಂದಲೂ ಅಧಿಕಾರಿಗಳು ಭಾರೀ ಮೊತ್ತದ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಹಣ ಎಲ್ಲಿಂದ ಸಂಗ್ರಹಿಸಲಾಗಿತ್ತು, ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿಲ್ಲ. ಇನ್ನೂ ಹಲವಾರು ವಿಚ್ಛಿದ್ರವಕಾರಿ ಸಂಗತಿಗಳಿಗೆ ಸಂಬಂಧಿಸಿದಂತೆ ಎನ್‌ಐಎ ಹಾಗೂ ತನಿಖಾ ಸಂಸ್ಥೆಗಳಿಗೆ ಸಾಕ್ಷ್ಯಗಳು ಲಭ್ಯವಾಗಿದೆ. ಆದರೆ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಉಳಿದ ವಿಚಾರಗಳನ್ನು ಅಧಿಕಾರಿಗಳು ಹೊರಗೆಡವಿಲ್ಲ.
ಸಿಎಎ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು, ಬಲವಂತದ ಮತಾಂತರಗಳು, ಮುಸ್ಲಿಂ ಯುವಕರ ಆಮೂಲಾಗ್ರೀಕರಣ, ಮನಿ ಲಾಂಡರಿಂಗ್ ಮತ್ತು ನಿಷೇಧಿತ ಗುಂಪುಗಳೊಂದಿಗೆ ಸಂಪರ್ಕವನ್ನು ನಿರ್ವಹಿಸುವಲ್ಲಿ ಪಿಎಫ್‌ಐ ಪಾತ್ರದ ಕುರಿತಾಗಿ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಧರ್ಮಗಳನ್ನು ಪ್ರತಿಪಾದಿಸುವ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಜನರನ್ನು ಕೊಲ್ಲುವುದು, ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಲು ಸ್ಫೋಟಕಗಳನ್ನು ಸಂಗ್ರಹಿಸುವುದು, ಜನರನ್ನು ಭಯಭೀತಗೊಳಿಸಲು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದು ಮೊದಲಾದ ಆರೋಪಗಳನ್ನು ಪಿಎಫ್‌ಐ ಎದುರಿಸುತ್ತಿದೆ.
ಯಾವ್ಯಾವ ಸಂಘಟನೆಗಳು ಬ್ಯಾನ್‌ ಬರೆ?
ಪಿಎಫ್ ಐ ಸಂಘಟನೆಯ ಸಹವರ್ತಿಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹಬ್ ಫೌಂಡೇಶನ್, ಕೇರಳಾ ಸಂಘಟನೆಗಳು ದೇಶದಲ್ಲಿ ಬ್ಯಾನ್‌ ಆಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!