ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಗಳೂರು:
ಅಡಿಕೆ ಕೃಷಿಕರ ಜೀವನಾಡಿಯಾಗಿರುವ ಕ್ಯಾಂಪ್ಕೊ ಮೇ 17 ಸೋಮವಾರದಿಂದ ಕೃಷಿ ಉತ್ಪನ್ನಗಳ ಖರೀದಿಯನ್ನು ಪುನರಾರಂಭಿಸಲು ನಿರ್ಧರಿಸಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಸರಕಾರದ ಮಾರ್ಗಸೂಚಿಯಂತೆ ರೋಗ ಪ್ರಸರಣವನ್ನು ನಿಯಂತ್ರಿಸುವ ದೃಷ್ಟಿಯಿಂದ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಖರೀದಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಿರುವ ಕ್ಯಾಂಪ್ಕೊ, ಸೋಮವಾರದಿಂದ ಕೇರಳ ಮತ್ತು ಕರ್ನಾಟಕದ ತನ್ನ ಎಲ್ಲಾ ಶಾಖೆಗಳಲ್ಲಿ ಅಡಿಕೆ ಮತ್ತು ಕೊಕ್ಕೊ ಬೀಜಗಳನ್ನು ಖರೀದಿಸಲಿದೆ. ಪ್ರತಿದಿನ ಗರಿಷ್ಠ 25 ಸದಸ್ಯರಿಂದ (ಉಪಶಾಖೆಗಳಲ್ಲಿ ವಾರದಲ್ಲಿ ಒಂದು ದಿನ ಗರಿಷ್ಠ 15 ಸದಸ್ಯರಿಂದ) ಸರದಿಯ ಪ್ರಕಾರ ತಲಾ ಗರಿಷ್ಠ ಒಂದು ಕ್ವಿಂಟಾಲ್ ಅಡಿಕೆಯನ್ನು ಖರೀದಿಸಲಿದ್ದು, ಕೊಕ್ಕೊ ಖರೀದಿಗೆ ಯಾವುದೇ ನಿರ್ಬಂಧ ಹಾಕಲಾಗಿಲ್ಲ. ಆದರೆ ಸದ್ಯ ಕಾಳುಮೆಣಸಿನ ಖರೀದಿ ಸ್ಥಗಿತಗೊಳಿಸಲಾಗಿದೆ. ಆಯಾ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸರಕಾರದ ಕೋವಿಡ್ ಲಾಕ್ಡೌನ್ ನಿಯಮಗಳನ್ನು ಅನುಸರಿಸಿಕೊಂಡು ಮೇ 17ರಿಂದ ಬೆಳಗ್ಗೆ 6ರಿಂದ 9 ಗಂಟೆಯ ವರೆಗೆ ಖರೀದಿ ನಡೆಯಲಿದ್ದು, ಸದಸ್ಯರು ಸಹಕರಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್ ವಿನಂತಿಸಿದ್ದಾರೆ.