ಜ.21ರಿಂದ 22ರ ವರೆಗೆ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾಂಸ್ಕೃತಿಕ ಮಹೋತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆ ಸಹಯೋಗದಲ್ಲಿ
ಜ.21ರಿಂದ 22ರ ವರೆಗೆ ಇಲ್ಲಿಯ ಸಂತೋಷ ನಗರದ ಜಿ.ಕೆ. ಶಾಲೆಯ ಹತ್ತಿರ ಎರಡು ದಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದಿಂದ ನಗರದಲ್ಲಿ ಕೇಂದ್ರ ಸಚಿವ ಆಶ್ರಯದಲ್ಲಿ ಗಾಳಿಪಟ ಉತ್ಸವ ನಡೆಸಲಾಗುತ್ತಿದೆ. ಈ ವರ್ಷ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸಾಂಸ್ಕೃತಿಕ ಸಮಾರಂಭ ಸಹ ಏರ್ಪಡಿಸಲಾಗಿದೆ ಎಂದರು.

ಗಾಳಿಪಟ ಉತ್ಸವ ಸ್ಪರ್ಧೆಯಲ್ಲಿ ದೇಶ ಅಷ್ಟೇ ಅಲ್ಲದೆ ವಿದೇಶಗಳಾದ ಲಂಡನ್, ಅಮೇರಿಕಾ, ಪ್ರಾನ್ಸ್,ಇಂಗ್ಲೆಂಡ್ ಸೇರಿ ಒಟ್ಟು 15 ದೇಶದ 25  ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸಂತೋಷ ನಗರದ ಜಿ.ಕೆ. ಶಾಲೆಯ ಹತ್ತಿರ ವೇದಿಕೆ ಸಿದ್ಧತೆ ನಡೆದಿದೆ. ಸಾರ್ವಜನಿಕರು ಕುಟುಂಬ ಸಮೇತ ಬಂದು ಉತ್ಸವದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.

ಜ. 21 ರಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಅತಿಥಿಗಳಾಗಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಸೇರಿದಂತೆ ಅನೇಕರು ಭಾಗವಹಿಸುವರು ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಆಹಾರ ಉತ್ಸವಕ್ಕೆ ಚಾಲನೆ ದೊರೆಯಲಿದೆ. 11.30 ಕ್ಕೆ 9 ರಿಂದ 12 ತರಗತಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿಯವರ ಬರೆದಿರುವ ಎಕ್ಸಾಮ ವಾರಿಯರ್ಸ್ ವಿಷಯದ ಕುರಿತು ಪರೀಕ್ಷಾ ಪೇ ಚರ್ಚೆ ಸ್ಪರ್ಧೆಗೆ ತೋಟಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡುವರು. ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸುವರು. ಸಂಜೆ 5.30 ಕ್ಕೆ ರಾಘವೇಂದ್ರ ಆಚಾರ್ಯ ಅವರಿಂದ ಸ್ಟ್ಯಾಂಡಪ್ ಕಾಮಿಡಿ, 6.30 ಕ್ಕೆ ಅನನ್ಯ ಭಟ್, ಚೇತನ್ ನಾಯಕ್ ಹಾಗೂ ಆಲ್ ಓಕೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಉತ್ಸವದ ಅಂಗವಾಗಿ ದೇಸಿಯ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಜ. 22 ರಂದು 12.30 ಕ್ಕೆ ಏರ್ಪಡಿಸಿದ ದೇಸಿ ಕ್ರೀಡೆಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡುವರು. ಸಂಜೆ 6.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ ಹಾಗೂ ಪಿ.ರಾಜೀವ ಭಾಗವಹಿಸುವರು. ಗಾಯಕರಾದ ವಾಸುಕಿ ವೈಭವ್, ಅನುರಾಧ ಭಟ್, ಸಂಗೀತಾ ರವೀಂದ್ರನಾಥ್, ಅಶ್ವಿನಿ ಶರ್ಮಾ, ಮಹನ್ಯಾ ಪಾಟೀಲ ಅವರಿಂದ ಪ್ರದರ್ಶನ ನಡೆಯಲಿದೆ.

ಗಾಳಿಪಟ ಉತ್ಸವದ ಪೋಸ್ಟರ್ ಬಿಡುಗಡೆ
ಈ ಸಂದರ್ಭದಲ್ಲಿ ಗಾಳಿಪಟ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದರು.

ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ, ಮಲ್ಲಿಕಾರ್ಜುನ ಪಾಟೀಲ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!