ಮೆಸ್ಸಿಯಿಂದ ಎಂಬಾಪೆ ವರೆಗೆ: 2022 FIFA ವಿಶ್ವಕಪ್‌ನ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಫಲಿಸಿದೆ. ಕತಾರ್‌ ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಅರ್ಜೆಂಟೀನಾ ಹೊಸ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫ್ರಾನ್ಸ್‌ ವಿರುದ್ಧ ಗೆಲ್ಲುವ ಮೂಲಕ  1978 ಮತ್ತು 1986 ರ ಬಳಿಕ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಅನ್ನು ಎತ್ತಿಹಿಡಿದಿದೆ. ಫುಟ್ಬಾಲ್‌ ದಂತಕತೆ ಲಿಯೋನೆಲ್ ಮೆಸ್ಸಿ ಎರಡು ಗೋಲು ಗಳಿಸುವುದರೊಂದಿಗೆ ತಮ್ಮ ವಿಶ್ವಕಪ್‌ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಹೆಚ್ಚುವರಿ ಸಮಯದ ನಂತರ 3-3 ಡ್ರಾ ಆಗಿದ್ದ ಪಂದ್ಯದಲ್ಲಿ ಬಳಿಕ ನಡೆದ ಫೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-2 ರಿಂದ ಫ್ರಾನ್ಸ್ ಅನ್ನು ಸೋಲಿಸಿತು. ಫ್ರಾನ್ಸ್ ನ ಕೈಲಿಯನ್ ಎಂಬಪ್ಪೆ ಹ್ಯಾಟ್ರಿಕ್ ಗೋಲು ಬಾರಿಸಿದರೂ ಸತತ ವಿಶ್ವಕಪ್ ಗೆಲ್ಲುವ ಅವರ ಕನಸು ಭಗ್ನಗೊಂಡಿತು.

2022 ರ FIFA ವಿಶ್ವಕಪ್‌ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:
ಗೋಲ್ಡನ್ ಬಾಲ್
ಪಂದ್ಯಾವಳಿಯ ಅತ್ಯುತ್ತಮ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಅನ್ನು ಅರ್ಜೆಂಟೀನಾ ನಾಯಕ ಮೆಸ್ಸಿ ಗೆದ್ದರು. ಫೈನಲ್‌ನಲ್ಲಿ ಎರಡು ಬಾರಿ ಗೋಲು ಗಳಿಸಿದ ಮೆಸ್ಸಿ ತಮ್ಮ ಗೋಲುಗಳ ಸಂಖ್ಯೆಯನ್ನು ಏಳಕ್ಕೆ ಏರಿಸಿಕೊಂಡರು. ಗೋಲ್ಡನ್ ಬಾಲ್ ರೇಸ್‌ನಲ್ಲಿ ಮೆಸ್ಸಿ ನಂತರ ಕೈಲಿಯನ್ ಎಂಬಪ್ಪೆ ಎರಡನೇ ಸ್ಥಾನ ಪಡೆದರು. ಕ್ರೊಯೇಷಿಯಾ ನಾಯಕ ಲೂಕಾ ಮೊಡ್ರಿಕ್ ಮೂರನೇ ಸ್ಥಾನ ಪಡೆದರು.

ಗೋಲ್ಡನ್ ಬೂಟ್
ಫೈನಲ್‌ ನಲ್ಲಿ ಅದ್ಭುತ ಹ್ಯಾಟ್ರಿಕ್‌ ಗೋಲು ಸಿಡಿಸಿದರೂ ದುರದೃಷ್ಟಕರವಾಗಿ ಸೋತ ತಂಡದ ಸಾಲಿನಲ್ಲಿ ನಿಂತ ಫ್ರಾನ್ಸ್‌ ನ ಸ್ಟಾರ್‌ ಆಟಗಾರ ಕೈಲಿಯನ್‌ ಎಂಬಾಪೆ ಪ್ರತಿಷ್ಠಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯನ್ನು ಪಂದ್ಯಾವಳಿಯಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡಲಾಗುತ್ತದೆ. ಎಂಬಾಪೆ 7 ಪಂದ್ಯಗಳಿಂದ 8 ಗೊಳುಗಳಿಸುವ ಮೂಲಕ ಮೆಸ್ಸಿಯನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು. ಅರ್ಜೆಂಟೀನಾ ಸ್ಟ್ರೈಕರ್ ಜೂಲಿಯನ್ ಅಲ್ವಾರೆಜ್ ಮತ್ತು ಫ್ರಾನ್ಸ್‌ನ ಒಲಿವಿಯರ್ ಗಿರೌಡ್ ಇಬ್ಬರೂ ತಲಾ ನಾಲ್ಕು ಗೋಲು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಗೋಲ್ಡನ್ ಗ್ಲೋವ್
ಫೈನಲ್‌ ನಲ್ಲಿ ಅದ್ಭುತ ತಡೆಗೋಡೆಯಾಗಿ ಅರ್ಜೆಂಟೀನಾವನ್ನು ಗೆಲುವಿನ ದಡ ಮುಟ್ಟಿಸಿದ ಗೋಲ್‌ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಗೋಲ್ಡನ್ ಗ್ಲೋವ್ ಪ್ರಶಸ್ತಿ ಗೆದ್ದರು. ಇದನ್ನು ಪಂದ್ಯಾವಳಿಯ ಅತ್ಯುತ್ತಮ ಗೋಲ್‌ಕೀಪರ್‌ಗೆ ನೀಡಲಾಗುತ್ತದೆ. ಆಸ್ಟನ್ ವಿಲ್ಲಾಗಾಗಿ ಕ್ಲಬ್ ಫುಟ್‌ಬಾಲ್ ಆಡುವ 30 ವರ್ಷದ ಮಾರ್ಟಿನೇಜ್‌ ಫೆನಾಲ್ಟಿ ಶೂಟೌಟ್‌ನಲ್ಲಿ ಕಿಂಗ್ಸ್ಲಿ ಕೋಮನ್ ಅವರ ಪೆನಾಲ್ಟಿಯನ್ನು ಅತ್ಯದ್ಭುತವಾಗಿ ತಡೆದು ಅರ್ಜೆಂಟೀನಾ 4-2 ರಲ್ಲಿ ಗೆಲ್ಲಲು ಕಾರಣರಾದರು.

ಯುವ ಆಟಗಾರ ಪ್ರಶಸ್ತಿ
ಅರ್ಜೆಂಟೀನಾದ ಎಂಜೊ ಫೆರ್ನಾಂಡಿಸ್ ಅವರು ಅದ್ಭುತ ಆಟಕ್ಕಾಗಿ “ಯಂಗ್ ಪ್ಲೇಯರ್” ಪ್ರಶಸ್ತಿಯನ್ನು ಗೆದ್ದರು. 21 ವರ್ಷದ ಮಿಡ್‌ಫೀಲ್ಡರ್ ಫೆರ್ನಾಂಡಿಸ್‌ ಭವಿಷ್ಯದ ತಾರೆಯೆಂದು ಪರಿಗಣಿಸಲಾಗುತ್ತಿದೆ. ಮೆಕ್ಸಿಕೊ ವಿರುದ್ಧ 2-0 ಗೆಲುವಿನಲ್ಲಿ ಎಲ್ಲರ ಗಮನ ಸೆಳೆದ್ದರು. ಅಲ್ಲಿ ಅವರು ದ್ವಿತೀಯಾರ್ಧದಲ್ಲಿ ಬದಲಿಯಾಗಿ ಬಂದು ಗೋಲು ಸಿಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!