ಈ ವರ್ಷದಿಂದಲೇ ಮೈಸೂರಿನ ಟೂರಿಸ್ಟ್ ಸರ್ಕ್ಯೂಟ್ ಪ್ರಾರಂಭ: ಮುಖ್ಯಮಂತ್ರಿ ಬೊಮ್ಮಾಯಿ

ಹೊಸದಿಗಂತ ವರದಿ, ಮೈಸೂರು:

ಮೈಸೂರಿಗೆ ಟೂರಿಸ್ಟ್ ಸರ್ಕ್ಯೂಟ್‌ನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಕೈಗಾರಿಕೆಗಳಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಹಾಗಾಗಿ ಸರ್ಕಾರ ಇಲ್ಲಿ ಕೈಗಾರಿಕೆಗಳ ಬೆಳವಣಿಗೆ ಉತ್ತೇಜನ ನೀಡಲಿದೆ. ಈಗಾಗಲೇ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 370 ಕೋಟಿ ರೂ ಬಿಡುಗಡೆ ಮಾಡಿದ್ದೇನೆ, ಇದು ಅಭಿವೃದ್ಧಿಯಾದರೆ, ಅಂತರಾಷ್ಟಿಯ ವಿಮಾನಗಳು ಇಲ್ಲಿಗೆ ಬಂದು ಇಳಿಯಲಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆಯ ಅಭಿವೃದ್ಧಿಗೆಂದು 89 ಕೋಟಿ ರೂ ಬಿಡುಗಡೆ ಮಾಡಲಾಗಿದೆ. 1 ಸಾವಿರ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಸ್ಟಲ್, ಹಾಗೂ ವರ್ಕಿಂಗ್ ಮಹಿಳೆಯರಿಗೆಂದು ದೊಡ್ಡ ಮಟ್ಟದಲ್ಲಿ ಹಾಸ್ಟಲ್ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಭಾರತ ಕಂಡು ಅಪರೂಪದ ಧೀಮಂತ ನಾಯಕ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರು.
ಭಾರತ ಹಲವಾರು ಪ್ರಧಾನ ಮಂತ್ರಿಗಳನ್ನು ಕಂಡಿದೆ. ಆದರೆ ದೇಶದ ಉದ್ದಕ್ಕೂ ಜನ ಮೆಚ್ಚಿಗೆ ಪಡೆದ ಅಪರೂಪದ ಪ್ರಧಾನಿ ನರೇಂದ್ರ ಮೋದಿ ಮಾತ್ರ.
ಕಳೆದ 70 ವರ್ಷಗಳ ರಾಜಕಾರಣದ ಇತಿಹಾಸದಲ್ಲಿ ಅಧಿಕಾರ ರಾಜಕಾರಣವನ್ನು ಮಾಡಿಕೊಂಡು ಬಂದವರು ಇದ್ದಾರೆ. ಅಧಿಕಾರ ಉಳಿಸಿಕೊಳ್ಳಲು, ಅಧಿಕಾರದಲ್ಲಿ ಮುಂದುವರಿಯುವುದಕ್ಕಾಗಿ ರಾಜಕಾರಣವನ್ನು ಮಾಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ಜನರ ಅಭಿವೃದ್ಧಿಗಾಗಿ, ಜನರ ಏಳಿಗೆಗಾಗಿ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಡತನ, ಹಸಿವು, ಅವಮಾನ, ಅಪಮಾನವನ್ನು ಅನುಭವಿಸಿದ್ದಾರೆ. ಹಾಗಾಗಿ ತಮ್ಮ ಈ ಸ್ಥಿತಿ ಈ ದೇಶದ ಯಾವ ನಾಗರಿಕನಿಗೂ ಬರಬಾರದೆಂದ ನಿಟ್ಟಿನಲ್ಲಿ ಅನೇಕ ಬಡವರ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಭಿವೃದ್ಧಿ, ಸೈದಾಂತಿಕ, ಮಾನವೀಯ ಮೌಲ್ಯಗಳ ರಾಜಕಾರಣ ಮಾಡಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಶಕ್ತಿ ತುಂಬಿದ್ದಾರೆ. ಪ್ರಧಾನಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಯುವಕರಿಗೆ ಮುದ್ರಾ ಯೋಜನೆಯಡಿ ಉದ್ಯಮಿಗಳಾಗುವಂತೆ ಮಾಡಿದ್ದಾರೆ. ಗರ್ಭಿಣಿಯರಿಗೆ ಮಾತೃವಂದನೆ, ಉಜ್ವಲಾ ಯೋಜನೆಯನ್ನು ಮನೆ, ಮನೆಗೂ ನೀಡಿದ್ದಾರೆ. ಜನರ ಬದುಕನ್ನು ಹಸನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ದೇಶವನ್ನು ಅಖಂಡತೆ. ಸುರಕ್ಷತೆ, ಸಾಮಾರಸ್ಯದಿಂದ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಭಾರತ ಹೊಂದುವ ಕನಸನ್ನು ಕಂಡಿದ್ದಾರೆ. ಅವರ ಕನಸ್ಸು ನನಸು ಮಾಡುವುದಕ್ಕೆ ಕರ್ನಾಟಕದಿಂದಲೂ 1.2 ಟ್ರಿಲಿಯನ್ ಆರ್ಥಿಕತೆ ಚಟುವಟಿಕೆ ನಡೆಸಲು ನಿರಂತರವಾಗಿ ಕೆಲಸ ಮಾಡಲಾಗುವುದು. ಈ ಮೂಲಕ ಮೋದಿ ಅವರ ಕನಸಿಗೆ ದೊಡ್ಡ ಕಾಣಿಕೆಯನ್ನು ರಾಜ್ಯ ನೀಡಲಿದೆ ಎಂದು ಹೇಳಿದರು.
ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವಿದೆ. 2023ರ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಅದೇ ರೀತಿ 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಹಾಗಾಗಿ ಡಬ್ಬಲ್ ಇಂಜಿನ್ ಸರ್ಕಾರ ಮುಂದುವರಿಯಲಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಪಥ  ಮುನ್ನೇಡೆಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಪಾಲ ತಾವರ್ ಚಂದ್ ಗೊಹಲಾಟ್, ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್, ಪ್ರತಾಪ್‌ಸಿಂಹ, ಸುಮಲತಾ ಅಂಬರೀಶ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!