ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿನ ಉದ್ಯಾನವನಗಳ ಸ್ವತ್ಛತೆ ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಉದ್ಯಾನವನಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವವರಿಗೆ ಹೆಚ್ಚಿನ ದಂಡ ವಿಧಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ನಗರದ ಉದ್ಯಾನವನಗಳಲ್ಲಿ ಸಾಕು ನಾಯಿಗಳಿಂದ ಆಗುತ್ತಿರುವ ಮಲ ವಿಸರ್ಜನೆಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಮೆಸೆರ್ಸ್ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕೂಪ) ಎಂಬ ಸರ್ಕಾರೇತರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ಪೀಠ, ಹಲವು ಮಾರ್ಗಸೂಚಿಗಳನ್ನು ರಚಿಸಿ, ಅರ್ಜಿ ಇತ್ಯರ್ಥಪಡಿಸಿತು.
ಉದ್ಯಾನವನ ಪ್ರದೇಶ ಮತ್ತು ಅದರ ಆವರಣದಲ್ಲಿ ಉಗುಳುವುದು, ಕಸವನ್ನು ಎಸೆಯಿವುದು, ಸಾಕು ಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ಮಾಡುವವರನ್ನು ನಿಯಂತ್ರಿಸಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಮತ್ತು ಅದನ್ನು ಉಲ್ಲಂಸುವವರ ವಿರುದ್ಧ ದಂಡವನ್ನು ವಿಧಿಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜವಾಬ್ದಾರಿಯಾಗಿರಲಿದೆ. ಆದರೆ, ತೋಟಗಾರಿಕೆ ಇಲಾಖೆ, ಬಿಬಿಎಂಪಿ ಅಧಇಕಾರಿಗಳು, ಸಿಬ್ಬಂದಿ ಈ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಜನರಿಂದ 1288 ದೂರು ದಾಖಲಾಗಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿ ಉಪದ್ರವ ಉಂಟಾಗದಂತೆ ನಿಷೇಧಿಸುವ ಅವಕಾಶವಿದ್ದರೂ ಅವುಗಳನ್ನು ಜಾರಿ ಮಾಡುವ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಅರ್ಜಿದಾರರು ವಿಚಾರಣ ವೇಳೆ ತಿಳಿಸಿದರು.
ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ, ನಾಯಿಗಳ ವಿಕೃತ ನಡೆಯಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಿದೆ. ಸಾರ್ವಜನಿಕ ಉದ್ಯಾನಗಳಲ್ಲಿ ಎಲ್ಲಾ ರೀತಿಯ ರೀತಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ಸರ್ಕಾರ ಹಾಗೂ ಬಿಬಿಎಂಪಿ ಜವಾಬ್ದಾರಿಯಾಗಿದೆ ಎಂದು ಆದೇಶಿಸಿತು. ಅಲ್ಲದೆ, ಉದ್ಯಾನವನಗಳಲ್ಲಿ ಸಾಕುನಾಯಿ ಮಲ ಮಾಡಿಸುವ ಮಾಲೀಕರಿಗೆ ದಂಡ ವಿಧಿಸುವಂತೆ ಸೂಚನೆ ನೀಡಿತು.