ಹೊಸ ದಿಗಂತ ವರದಿ, ಚಿತ್ರದುರ್ಗ:
ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಮಂಡಿಸಲಾಗಿದೆ. ಇದು ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಜಲ ಜೀವನ ಮಿಷನ್ ಯೋಜನೆ ಜಾರಿಗೊಳಿಸಲಾಯಿತು. 19 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿತ್ತು. ೧೦ ಕೋಟಿ ಮನೆಗಳಿಗೆ ನೀರು ನೀಡಲಾಗಿದೆ. ಈ ವರ್ಷ 3.9 ಕೋಟಿ ಮನೆಗಳಿಗೆ ನೀರು ಕೊಡಲು ಉದ್ದೇಶಿಸಲಾಗಿದೆ. ನಮ್ಮ ರಾಜ್ಯ ಹಿಂದಿತ್ತು. ಆದರೆ ಈಗ ಟಾಪ್ 10 ನಲ್ಲಿ ಬಂದಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಜಲ ಜೀವನ ಮಿಷನ್‌ನಡಿ ಕೆಲಸ ನಡೆಯುತ್ತಿದ್ದು. ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಮನೆಗಳ ನಿರ್ಮಾಣಕ್ಕೆ 48 ಕೋಟಿ ಹಣ ಮೀಸಲಿಡಲಾಗಿದೆ. ರಾಜ್ಯದಲ್ಲಿ 5 ಲಕ್ಷ ಮನೆಗಳನ್ನು ಕೊಡಲಾಗಿದೆ. ಜಿಲ್ಲೆಯಲ್ಲೂ ಮನೆಗಳನ್ನು ಕೊಟ್ಟಿದ್ದು 2025 ರೊಳಗೆ ಸೂರು ಇಲ್ಲದಿರುವ ವ್ಯಕ್ತಿ ಇಲ್ಲದಂತೆ ಮಾಡಲಾಗುವುದು. ಅಂಗಬವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದರಿಂದ ಮಕ್ಕಳ ಯೋಚನಾ ಲಹರಿ ಹಾಗೂ ಕಲಿಕಾಮಟ್ಟ ಸುಧಾರಿಸಲಿದೆ. ಶಿಕ್ಷಣದ ದೃಷ್ಠಿಯಿಂದ 200 ಹೊಸ ಟಿ.ವಿ. ಚಾನಲ್‌ಗಳನ್ನು ಆರಂಭಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಬೆಂಬಲ ಬೆಲೆಗೆ 2.3 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ಅರಣ್ಯ ಭೂಮಿ ಉಳುಮೆ ಮಾಡಿದ ರೈತರನ್ನು ಒಕ್ಕಲೆಬ್ಬಿಸಬಾರದು. ಅರಣ್ಯಕ್ಕೆ ಹೊಂದಿಕೊಂಡಂತಿರುವ ಬುಡಕಟ್ಟು ಜನರು ಕಾಡಿನ ಮೂಲದಿಂದ ತಯಾರಿಸುವ ಉತ್ಪನ್ನಗಳ ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಟೆಲಿ ಮೆಡಿಸಿನ್, ಟೆಲಿ ಡಿಜಿಟಲ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆಗೆ 2.3 ಲಕ್ಷ ಕೋಟಿ ಮೀಸಲಿಡಲಾಗಿದೆ. ಹೊದುರ್ಗದಲ್ಲಿ ಟೆಲಿ ಮೆಡಿಸಿನ್ ಐಸಿಯು ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಈ ಮೊದಲು 73 ಸಾವಿರ ಕೋಟಿ ಕೊಡಲಾಗುತ್ತಿತ್ತು. ಇದನ್ನು 86,200 ಕೋಟಿಗಳಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಆರೋಗ್ಯ ಯೋಜನೆಳಿಗೆ ಚಾಲನೆ ನೀಡಲಾಗಿದೆ. ಪ್ರತಿ ಗ್ರಾ.ಪಂ.ಗಳಲ್ಲಿ 28 ಕಾಮಗಾರಿಗಳನ್ನು ನಡೆಸಬಹುದಾಗಿದೆ. ಈ ಕುರಿತು ಎಲ್ಲ ಗ್ರಾ.ಪಂ.ಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಜಿ.ಪಂ. ಸಿಇಒ, ತಾ.ಪಂ. ಇಒಗಳು ಪ್ರತಿ ಪಂಚಾಯಿತಿಗಳಿಗೂ ಭೇಟಿ ನೀಡಬೇಕು. ಪಿಡಿಓಗಳು ಪ್ರತಿ ಹಳ್ಳಿಗೂ ಭೇಟಿ ನೀಡಬೇಕು ಎಂದರು.
ಭಾರತ ನೆಟ್ ಯೋಜನೆಯಡಿ ದೇಶದ ಎಲ್ಲ ಹಳ್ಳಿಗಳಿಗೆ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುವುದು. ನಮ್ಮ ಜಿಲ್ಲೆಯಲ್ಲಿ ಕೆಲವು ಪಂಚಾಯಿತಿಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಎಲ್ಲ ವಿಚಾರಗಳನ್ನು ಎಲ್‌ಇಡಿ ಮೂಲಕ ಬಿತ್ತರಿಸಲಾಗುವುದು. ಇಂಟರ್‌ನೆಟ್ ಮೂಲಕ ಗ್ರಾ.ಪಂ.ಗಳನ್ನು ನೇರ ಕೇಂದ್ರ ಸರ್ಕಾರಕ್ಕೆ ಸಂಪರ್ಕ ಏರ್ಪಡಿಸಲಾಗುವುದು. 25 ಸಾವಿರ ಕಿ.ಮೀಲ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಗುರಿ ಇದೆ. ಹೊಳಲ್ಕೆರೆ – ಹೊಸದುರ್ಗ, ಹಿರಿಯೂರು – ಹುಳಿಯಾರು ರಸ್ತೆಗಳಿಗೆ ಮುಂಜೂರಾತಿ ದೊರೆತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್‌ಆರ್‌ಟಿಸಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ನರೇಂದ್ರ ಹಾಜರಿದ್ದರು.