ಅಕ್ಟೋಬರ್, ನವೆಂಬರ್ ತಿಂಗಳಿನಿಂದಲೇ ಅವಿಭಜಿತ ದಕ್ಷಿಣ ಕನ್ನಡಕ್ಕೆ ಕುಚ್ಚಲಕ್ಕಿ ಊಟ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಡಿತರ ಗ್ರಾಹಕರಿಗೆ ಮುಂದಿನ ಅಕ್ಟೋಬರ್- ನವೆಂಬರ್ ತಿಂಗಳಿನಿಂದ ಕುಚ್ಚಲಕ್ಕಿ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದ ಅವರು, ಪಡಿತರ ಗ್ರಾಹಕರಿಗೆ ಕುಚ್ಚಲಕ್ಕಿ ಪೂರೈಕೆ ಮಾಡಲು ವಾರ್ಷಿಕ 12 ಲಕ್ಷ ಕ್ವಿಂಟಾಲ್ ಅಕ್ಕಿ ಬೇಕು. ಅದಕ್ಕೆ 18 ಲಕ್ಷ ಕ್ವಿಂಟಾಲ್ ಭತ್ತದ ಅಗತ್ಯವಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮೂರು ಲಕ್ಷ ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತದೆ. ಅದರಲ್ಲಿ ಬಹುಭಾಗ ರೈತರ ದೈನಂದಿನ ಬಳಕೆಗೆ ಉಪಯೋಗವಾಗುತ್ತದೆ. ಹಾಗಾಗಿ ಇತರ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಭತ್ತಕ್ಕಾಗಿ ಅವಲಂಬನೆ ಅನಿವಾರ್ಯವಾಗಿದೆ ಎಂದು ಸಚಿವರು ಹೇಳಿದರು.
ಛತ್ತೀಸ್‌ಗಡದಿಂದಲೂ ಅಕ್ಕಿ ತರಿಸಲಾಗುವುದು. ರಾಜ್ಯ ಬೆಳಗಾವಿ, ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ಭತ್ತ ಸಂಗ್ರಹಿಸುವ ಮಾತುಕತೆ ಹಿಂದೆ ನಡೆದಿತ್ತು. ಆದರೆ ಅದು ಸಾಧ್ಯ ಆಗಲಿಲ್ಲ. ಈಗ ಕೇರಳ ಮತ್ತು ತಮಿಳುನಾಡಿನಿಂದ ಅಕ್ಕಿ ಅಥವಾ ಭತ್ತ ಖರೀದಿಸಲಾಗುವುದು. ಕೇರಳಕ್ಕೆ ರಾಜ್ಯದ ತಂಡ ತೆರಳಿ ಅಧ್ಯಯನ ನಡೆಸಿ ಈಗಾಗಲೇ ವರದಿ ಸಲ್ಲಿಸಿದೆ. ತಮಿಳುನಾಡು ರಾಜ್ಯಕ್ಕೆ ಶೀಘ್ರದಲ್ಲಿ ರಾಜ್ಯದ ತಂಡ ತೆರಳಲಿದೆ. ಜೊತೆಗೆ ಛತ್ತೀಸ್‌ಗಡದಿಂದಲೂ ಭತ್ತ ಅಥವಾ ಅಕ್ಕಿ ತರಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!