Wednesday, August 10, 2022

Latest Posts

ಮಲೆನಾಡಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷಿಗೆ ಹಾನಿ, ಬೆಳೆ ನಾಶ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ.
ಎಡಬಿಡದ ಮಳೆಯಿಂದಾಗಿ ತೇಂವಾಂಶ ಹೆಚ್ಚಾಗಿ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಅಡಿಕೆ ಫಸಲು ಉದುರುತ್ತಿದ್ದರೆ, ಕೊಳೆ ರೋಗ ಕಾಣಿಸಿಕೊಂಡು ಇಳುವರಿ ಮೇಲೆ ತೀವ್ರ ದುಷ್ಪರಿಣಾಮ ಉಂಟು ಮಾಡುತ್ತಿದೆ.
ಮಳೆ ಜೊತೆಗೆ ರಬಸವಾಗಿ ಗಾಳಿಯೂ ಬೀಸುತ್ತಿರುವುದರಿಂದ ಶೇ.50 ಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶ ಸಂಭವಿಸಿದೆ. ಕಾಫಿ ಎಲೆಗಳು ಉದುರಿ ಗಿಡಗಳು ಬೋಳಾಗುತ್ತಿವೆ. ಇದರಿಂದಾಗಿ ಮುಂದಿನ ಬೆಳೆಯೂ ಕುಂಠಿತವಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಸುರಿಯುತ್ತಿರುವ ಮಳೆ ಅತಿಯಾದ ಶೀತದಿಂದ ಕೂಡಿದೆ. ಇದರಿಂದಾಗಿ ಕಾಫಿ ಫಸಲು ನೆಲಕ್ಕುದುರುತ್ತಿದೆ. ಅರೇಬಿಕಾ ಕಾಫಿ ಹಲವೆಡೆ ಕಟಾವಿಗೆ ಸನ್ನಿಹಿತವಾಗಿದೆ. ಈಗ ಸುರಿಯುತ್ತಿರುವ ಮಳೆಯಿಂದಾಗಿ ಹಣ್ಣಾದ ಅಲ್ಪ ಸ್ವಲ್ಪ ಕಾಫಿಯೂ ನೆಲಕ್ಕುದುರುತ್ತಿದೆ.
ಕಾಫಿಯೊಂದಿಗೆ ಪ್ರಮುಖ ಉಪ ಬೆಳೆಯಾದ ಕಾಳು ಮೆಣಸಿನ ಬಳ್ಳಿಗಳು ಸಹ ನಿರಂತರ ಮಳೆಯಿಂದಾಗಿ ಕೊಳೆ ರೋಗಕ್ಕೆ ತುತ್ತಾಗಿ ನೆಲಕ್ಕೊರಗುತ್ತಿದ್ದು, ಬಳ್ಳಿ ಸಮೇತ ಫಸಲು ಉದುರಿ ಭಾರೀ ನಷ್ಟ ಸಂಭವಿಸುತ್ತಿದೆ. ಸಂಕಂಷ್ಟದ ಸಂದರ್ಭದಲ್ಲಿ ಕೈಹಿಡಿಯುವ ಮೆಣಸು ಸಹ ಮಣ್ಣುಪಾಲಾಗುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಮೆಣಸಿನ ಬಳ್ಳಿಗಳು ನಶಿಸಿ ಹೋಗುವ ಆತಂಕವೂ ಎದುರಾಗಿದೆ. ಕಾಫಿ ಮತ್ತು ಕಾಳು ಮೆಣಸಿನ ಧಾರಣೆ ಸಹ ತೀವ್ರ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಗಳಿವೆ.
ಅಡಿಕೆ ಗಿಡಗಳು ಸಹ ಅಧಿಕ ತೇವಾಂಶದಿಂದಾಗಿ ಕೊಳೆ ರೋಗಕ್ಕೆ ತುತ್ತಾಗಿ ಫಸಲು ಉದುರಲಾರಂಭಿಸಿದೆ. ಗುಣಮಟ್ಟದ ಮೇಲೂ ಪರಿಣಾಮ ಉಂಟಾಗಿ ಫಸಲು ಹಾಗೂ ಬೆಲೆ ಎರಡೂ ಕೈಗೆಟುಕದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ದೇಶದ ಬೆನ್ನೆಲುಬಾಗಿರುವ ರೈತರು ಹಾಗೂ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ಎರಡೂ ಇಲಾಖೆಗಳು ಹಾಗೂ ಕಾಫಿ ಮಂಡಳಿಗಳು ಮತ್ತು ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಶೇ. 3 ರ ಬಡ್ಡಿ ಸರಳ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಕಳೆದ ಎರಡು ದಿನಗಳಿಂದ ಮಲೆನಾಡಿನಲ್ಲಿ ಮಳೆಯ ರಭಸ ಹೆಚ್ಚಾಗಿದೆ. ಬೆಳೆ ಹಾನಿ ಜೊತೆಗೆ ಆಸ್ತಿ ಪಾಸ್ತಿಗೂ ಹಾನಿ ಉಂಟಾಗುತ್ತಿದೆ. ಕೆಲವಡೆ ರಸ್ತೆಗಳಿಗೆ ಹಾನಿಯುಂಟಾಗಿ ಸಂಚಾರಕ್ಕೆ ತೊಡಕಾಗಿದೆ. ತೇವಾಂಶ ಹೆಚ್ಚಾಗಿ ಮನೆಗಳು ಕುಸಿಯುತ್ತಿವೆ. ಹಲವೆಡೆ ಮರಗಳು ನೆಲಕ್ಕುರುಳಿದ ಮಾಹಿತಿಗಳು ಇವೆ. ಒಟ್ಟಾರೆ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss