ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳ ನಡುವೆ ಏರ್ಪಡಿಸಲಾಗಿರುವ ‘ಕುಟುಂಬ-2021’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನ.4ರಿಂದ (ಇಂದಿನಿಂದ) ನಡೆಯಲಿದೆ.
ನ.12ರವರೆಗೆ ನಡೆಯಲಿರುವ ಪಂದ್ಯಾವಳಿಗೆ ಮಳೆಯ ನಡುವೆಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ಏಪ್ರಿಲ್ 21ರಿಂದ ಆರೆಂಭಗೊಂಡು ನಂತರದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪಂದ್ಯಾವಳಿಯನ್ನು ನ.4ರಿಂದ ಪುನರಾರಂಭಿಸಲಾಗುತ್ತಿದೆ. ಈ ಹಿಂದಿನ ಟೈಸ್ ಪ್ರಕಾರವೇ ಪಂದ್ಯಾವಳಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಒಟ್ಟು 98 ಕುಟುಂಬ ತಂಡಗಳು ಪಂದ್ಯಾವಳಿಯಲ್ಲಿ ಹೆಸರು ನೋಂದಾಯಿಸಿಕೊಡಿದ್ದು, ಈಗಾಗಲೇ ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಪ್ರಿ-ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದಿವೆ.
ಪಂದ್ಯಾವಳಿಗಾಗಿ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ (ಜಿಲ್ಲಾ ಕ್ರೀಡಾಂಗಣ) ಯುವ ವೇದಿಕೆ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿರಂತರ ಮಳೆಯಿಂದಾಗಿ ಮೈದಾನ ತೇವಗೊಂಡಿದ್ದು, ಬುಧವಾರ ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು ಸೇರಿ ಪಿಚ್ ಹಾಗೂ ಮೈದಾನ ಸಿದ್ಧಪಡಿಸಿದರು.
ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ಗೌರವ ಸಲಹೆಗಾರ ಯಾಲದಾಳು ಹರೀಶ್, ನಿರ್ದೇಶಕರುಗಳು ಪಾಲ್ಗೊಂಡಿದ್ದರು.