Tuesday, August 16, 2022

Latest Posts

ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧ ಮೋಹನ್ ಅಂತ್ಯಕ್ರಿಯೆ

ಹೊಸದಿಗಂತ ವರದಿ, ಮೈಸೂರು:

ಅಸ್ಸಾಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೈಸೂರು ಜಿಲ್ಲೆಯ ತಿ.ನರಸೀಪುರದ ಯೋಧ ಮೋಹನ್ ಅವರ ಅಂತ್ಯ ಕ್ರಿಯೆ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ಮೋಹನ್ ಅವರ ಮೃತದೇಹವನ್ನು ತಿ.ನರಸೀಪುರ ತಾಲೂಕಿನ ಮುಡುಕುತೊರೆ ಸಮೀಪದ ಬೆಟ್ಟಹಳ್ಳಿ ಗ್ರಾಮಕ್ಕೆ ಯೋಧ ಪಾರ್ಥಿವ ಶರೀರವನ್ನ ತರಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೋಹನ್ ಅವರ ಮೃತದೇಹದ ಮೆರವಣಿಗೆ ಮಾಡಲಾಯಿತು.

ಯೋಧನಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ಮತ್ತು ತಾಲ್ಲೂಕು ಆಡಳಿತ ಮೋಹನ್ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ರಸ್ತೆಯ ಇಕ್ಕೆಲಗಳಲ್ಲೂ ಜಮಾಯಿಸಿದ್ದ ಜನರು ಯೋಧ ಮೋಹನ್ ಗೆ ಜಯ ಘೋಷಣೆ ಕೂಗಿದರು. ವೀರ ಯೋಧ ಮೋಹನ್ ದೇಶ ಸೇವೆ ನೆನೆದು ಭಾವುಕರಾದರು. ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು, ಮೋಹನ್‌ಗೆ ಅಂತಿಮ ವಿದಾಯ ಹೇಳಿದರು.

ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮೋಹನ್ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಪ್ರತಿಯೊಬ್ಬರೂ ಭಾವುಕರಾದರು. ಯೋಧ ಮೋಹನ್ ಸ್ನೇಹಿತರು, ಗ್ರಾಮಸ್ಥರು ಜೈಕಾರ ಕೂಗಿದರು.

ಕಳೆದ ಮೂರು ದಿನಗಳ ಹಿಂದೆ ಅಸ್ಸಾಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೋಹನ್ ಅವರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿತ್ತು. ತೀವ್ರ ರಕ್ತಸ್ರಾವದಿಂದ ಮೋಹನ್ ಮೃತಪಟ್ಟಿದ್ದರು. ಕಳೆದ ಎರಡು ವರ್ಷದ ಹಿಂದಷ್ಟೇ ಮೋಹನ್ ವಿವಾಹವಾಗಿದ್ದರು. ಇದೀಗ ಮನೆ ಮಗನನ್ನ ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss