ಹೊಸ ದಿಗಂತ ವರದಿ, ಚಿತ್ರದುರ್ಗ:
ಜೀವನ ಇರುವುದು ಸಾಧನೆಗಾಗಿ. ಬದುಕಿನಲ್ಲಿ ಬರುವ ಎಲ್ಲ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು. ಸಮಸ್ಯೆ ಬಂದರೆ ವಿಚಲಿತರಾಗಬಾರದು, ಸ್ವೀಕರಿಸಬೇಕು. ಸಂಕಷ್ಟದ ನಡುವೆ ಸಾಹಸ ಮಾಡಿದಾಗ ಮಾತ್ರ ಉಜ್ವಲವಾದ ಬದುಕು ಕಾಣಲು ಸಾಧ್ಯ
ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತೊಂದನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮ ಮುಂದಿನ ಸಾಂಸಾರಿಕ ಜೀವನ ಗಲಾಟೆ ಸಂಸಾರವಾಗದೆ, ಗಟ್ಟಿ ಸಂಸಾರ ನಿಮ್ಮದಾಗಬೇಕು. ಕೊರೋನಾ ಲಸಿಕೆ ಬಂದಿದೆ. ಪ್ರತಿಯೊಬ್ಬರೂ ಕೊರೋನಾ ಲಸಿಕೆ ಹಾಕಿಸಿಕೊಳ್ಳಿ. ಕೊರೋನಾ ವಿರುದ್ಧ ಹೋರಾಡುತ್ತಿರುವ ಭಾರತ ಪ್ರಪಂಚಕ್ಕೆ ಕೊರೋನಾ ಲಸಿಕೆ ಪೂರೈಸುತ್ತಿರುವ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮದು ಎಂದರು.
ಸರಳ ಕಲ್ಯಾಣ ಮಹೋತ್ಸವ ಎಲ್ಲರಿಗೂ ಮಾದರಿ
ಮುಖ್ಯಅತಿಥಿ ಬೆಂಗಳೂರು ನಗರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಡಾ. ಸಿದ್ದರಾಮಣ್ಣ ಮಾತನಾಡಿ, ಬಸವಣ್ಣನವರು ಕಂಡ ಕನಸು ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಹಣ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿರುವ ಅನೇಕ ಮದುವೆಗಳು ಮುರಿದುಬಿದ್ದಿವೆ. ಶ್ರೀಮಠದಲ್ಲಿ ಭಕ್ತಿಸುಧೆ, ಜ್ಞಾನದಾಸೋಹ, ಅನ್ನದಾಸೋಹ ಎಲ್ಲವೂ ಇದೆ. ಇಂತಹ ಸರಳ ಕಲ್ಯಾಣ ಮಹೋತ್ಸವ ಎಲ್ಲರಿಗೂ ಮಾದರಿಯಾದುದು ಎಂದರು.
ಉತ್ತಮ ಕೆಲಸ ಮಾಡಲು ಪ್ರೇರಣೆ
ರಾಷ್ಟ್ರಪತಿ ಪದಕ ಪುರಸ್ಕೃತ ಆರಕ್ಷಕ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನನಗೆ ಅತ್ಯಂತ ಸಂತೋಷವಾಗಿದೆ. ಅನೇಕ ಕಷ್ಟ ಸಂದರ್ಭಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಮಾಡಿರುವ ಸನ್ಮಾನ ಇನ್ನು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಗೋಲಗೇರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಹಾವೇರಿಯ ಬಸವಶಾಂತಲಿಂಗ ಸ್ವಾಮೀಜಿ, ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ಹನುಮಲಿ ಷಣ್ಣುಖಪ್ಪ, ನಿವೃತ್ತ ಅಧೀಕ್ಷಕ ಇಂಜಿನಿಯರ್ ಜಿ.ಆರ್.ಮಲ್ಲೇಶಪ್ಪ, ಕೆಇಬಿ ಷಣ್ಮುಖಪ್ಪ, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.