ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಭಾರತ ಯುದ್ಧ ಮುಗಿದ ನಂತರ ವೇದವ್ಯಾಸರು ಹಿಮಾಲಯದಲ್ಲಿ ಧ್ಯಾನ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸೃಷ್ಟಿಕರ್ತ ಬ್ರಹ್ಮ ಮಹಾಭಾರತ ಮಹಾಕಾವ್ಯವನ್ನು ಬರೆಯುವಂತೆ ಹೇಳುತ್ತಾನೆ. ಸಂಪೂರ್ಣ ಯುದ್ಧವನ್ನು ವೀಕ್ಷಿಸಿದ್ದರಿಂದ ಮತ್ತು ಎಲ್ಲಾ ಪಾತ್ರಗಳನ್ನು ವೈಯಕ್ತಿಕವಾಗಿ ತಿಳಿದಿದ್ದರಿಂದ ನೀವೇ ಕಥೆ ಬರೆಯಲು ಸೂಕ್ತ ವ್ಯಕ್ತಿ ಎಂದು ಸೂಚಿಸುತ್ತಾನೆ.
ಮಹಾಭಾರತ ಸಾಮಾನ್ಯ ಕಥೆಯಲ್ಲ ಎಂಬುದು ವೇದವ್ಯಾಸರಿಗೆ ಗೊತ್ತಿತ್ತು. ಇದು ಸಂಕೀರ್ಣ ಮತ್ತು ದೀರ್ಘವಾಗಿರಲಿದೆ ಎನ್ನುವುದು ತಿಳಿದಿತ್ತು. ನಾನು ಬರೆದರೆ ಬಹಳ ಸಮಯ ಬೇಕಾಗಬಹುದು ಎನ್ನುವುದರನ್ನು ಅರಿತ ವೇದವ್ಯಾಸರು ಸಮರ್ಥ ಕಥೆ ಬರೆಯುವವರಿಗೆ ಹುಡುಕಾಟ ನಡೆಸುತ್ತಿದ್ದರು. ಕೊನೆಗೆ ತಮ್ಮ ಮಹಾಜ್ಞಾನದಿಂದ ಗಣಪತಿಯಿಂದ ಮಾತ್ರ ಬರೆಯಲು ಸಾಧ್ಯ ಎಂದು ತಿಳಿದು ಆತನನ್ನು ಸಂಪರ್ಕಿಸುತ್ತಾರೆ.
ವ್ಯಾಸರ ಮನವಿಯನ್ನು ಒಪ್ಪಿದರೂ ಗಣೇಶ ಎರಡು ಷರತ್ತನ್ನು ವಿಧಿಸುತ್ತಾನೆ. ವಿರಾಮವಿಲ್ಲದೆ ಸಂಪೂರ್ಣವಾಗಿ ಕಥೆಯನ್ನು ಹೇಳಬೇಕು. ಒಂದು ವೇಳೆ ವಿರಾಮ ನೀಡಿ ನಿಲ್ಲಿಸಿದರೆ ನಾನು ಮಧ್ಯದಲ್ಲೇ ಕಥೆ ಬರೆಯುವುದನ್ನು ನಿಲ್ಲಿಸುತ್ತೇನೆ ಎಂದು ಷರತ್ತನ್ನು ಹಾಕುತ್ತಾನೆ.
ಈ ಷರತ್ತನ್ನು ವೇದವ್ಯಾಸರು ಒಪ್ಪಿದ ನಂತರ ಅವರು ಗಣೇಶನಿಗೆ, ಕಥಾವಸ್ತು ಅಥವಾ ವಾಕ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಬರೆಯುವಂತಿಲ್ಲ ಎಂದು ಷರತ್ತು ವಿಧಿಸುತ್ತಾರೆ. ಈ ಷರತ್ತನ್ನು ಒಪ್ಪಿದ ನಂತರ ಶುಭ ಮುಹೂರ್ತದಲ್ಲಿ ಲಿಪಿಕಾರ ಗಣಪತಿಗೆ ವಂದಿಸಿ ವ್ಯಾಸರು ಕಥೆ ಹೇಳಲು ಶುರು ಮಾಡುತ್ತಾರೆ. ನಂತರ ಗಣಪ ಸಂಪೂರ್ಣ ಕಥೆಯನ್ನು ಬರೆದು ಮುಗಿಸುತ್ತಾನೆ ಎನ್ನುವ ನಂಬಿಕೆ ಇದೆ