ʼದಯವಿಟ್ಟು ಭಾರತದಲ್ಲಿ ಆಶ್ರಯ ಕೊಡಿ’; ಪಿಒಕೆ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯಿಂದ ಪ್ರಧಾನಿ ಮೋದಿಗೆ ಮನವಿ

ಹೊಸದಿಗಂತ ಡಿಜಟಲ್‌ ಡೆಸ್ಕ್‌
ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂತ್ರಸ್ತೆಯೊಬ್ಬರು ತನ್ನ ಕುಟುಂಬಕ್ಕೆ ಪ್ರಾಣಾಪಾಯವಿದ್ದು ಭಾರತದಲ್ಲಿ ತಮಗೆ ಆಶ್ರಯ ಮತ್ತು ರಕ್ಷಣೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಸಹಾಯ ಕೋರಿದ್ದಾರೆ.
ಏಳು ವರ್ಷಗಳ ಹಿಂದೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಮರಿಯಾ ತಾಹಿರ್ ಅವರು ತಮಗೆ ಭಾರತಕ್ಕೆ ಬರಲು ಅವಕಾಶ ನೀಡುವಂತೆ ಪ್ರಧಾನಿ ಮೋದಿಯವರಿಗೆ ಟ್ವಿಟರ್‌ ಮೂಲಕ ಭಾವನಾತ್ಮಕವಾಗಿ ಮೊರೆಯಿಟ್ಟಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ತನಗೆ ನ್ಯಾಯ ಒದಗಿಸುವಲ್ಲಿ ಪಿಒಕೆ ನ್ಯಾಯಾಲಯಗಳು, ಪೊಲೀಸರು ಮತ್ತು ಸರ್ಕಾರ ವಿಫಲವಾಗಿದೆ. ರಾಜಕಾರಣಿ ಚೌಧರಿ ತಾರಿಕ್ ಫಾರೂಕ್ ಮತ್ತು ಪೊಲೀಸರು ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಯಾವಾಗ ಬೇಕಾದರೂ ನನ್ನನ್ನು ಮತ್ತು ನನ್ನ ಮಕ್ಕಳನ್ನು ಕೊಲ್ಲಬಹುದು. ನಮ್ಮ  ಪರಿಸ್ಥಿತಿಯಿಂದ ಪ್ರಧಾನಿ ಮೋದಿ ಮಾತ್ರವೇ ನಮ್ಮನ್ನು ರಕ್ಷಿಸಲು ಸಾಧ್ಯ ಎಂದು ಆಕೆ ಹೇಳಿದ್ದಾರೆ.

ಮಹಿಳೆಯು 2015 ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಹರೂನ್ ರಶೀದ್, ಮಮೂನ್ ರಶೀದ್, ಜಮೀಲ್ ಶಫಿ, ವಕಾಸ್ ಅಶ್ರಫ್, ಸನಮ್ ಹರೂನ್ ಮತ್ತು ಇನ್ನೂ ಮೂವರು ಕೀಚಕರು ಆಕೆಯ ಮೇಲೆ ಪಶುವಿನಂತೆ ಎರಗಿದ್ದರು. ಮಹಿಳೆ ತನಗೆ ನ್ಯಾಯ ಕೊಡಿಸುವಂತೆ ಪೊಲೀಸರು, ಮತ್ತು ಸ್ಥಳೀಯ ರಾಜಕಾರಣಿಗಳಿಗೆ ಆಕೆ ಮನವಿ ಮಾಡಿಕೊಂಡರು. ಆದರೆ ಯಾರೊಬ್ಬರೂ ಆಕೆಯ ನೆರವಿಗೆ ಬಾರದೆ ಅತ್ಯಾಚಾರಿಗಳ ಪರ ನಿಂತರು. ಪ್ರಕರಣದ ಕುರಿತು ಬಾಯ್ಬಿಟ್ಟರೆ ಆಕೆಯನ್ನೇ ಕೊಲ್ಲುವುದಾಗಿ ಬೆದರಿಸಿದರು.
ಕಳೆದ ಏಳು ವರ್ಷಗಳಿಂದ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸಂತ್ರಸ್ಥೆ ತಾಹಿರ್ ಹೆಣಗಾಡುತ್ತಿದ್ದಾರೆ. ತಾನು ನ್ಯಾಯಕ್ಕಾಗಿ ಮನವಿ ಮಾಡಿ ಪಿಒಕೆ ನ್ಯಾಯಾಲಯಗಳಿಗೆ ಹಲವಾರು ಪತ್ರಗಳನ್ನು ಬರೆದಿದ್ದೇನೆ ಆದರೆ ನ್ಯಾಯಾಲಯವು ಸಹ ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿದೆ. ಜೊತೆಗೆ ನ್ಯಾಯಪೀಠದಲ್ಲಿರುವವರೆ ನನ್ನ ಮತ್ತು ನನ್ನ ಕುಟುಂಬಕ್ಕೆ ಅವಮಾನಿಸಿದ್ದಾರೆ. ನಾನು ವಿವಾಹಿತ ಮಹಿಳೆಯಾಗಿರುವುದರಿಂದ ನನಗೆ ನ್ಯಾಯವನ್ನು ನೀಡುವುದು ಕಷ್ಟ ಎಂದು ನ್ಯಾಯಾಲಯ ಹೇಳುತ್ತದೆ ಎಂದು ಮಹಿಳೆ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ. ಮರಿಯಾ ತಾಹಿರ್ ಭಿಂಬರ್ ಮೂಲದವಳು ಆದರೆ ಈಗ ತನ್ನ ಕುಟುಂಬದೊಂದಿಗೆ ಮೀರ್ಪುರ್ ಜಿಲ್ಲೆಯಲ್ಲಿ ವಾಸಿಸುತ್ತಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನನ್ನಂತೆ ಅನೇಕ ಅತ್ಯಾಚಾರ ಸಂತ್ರಸ್ತರಿದ್ದಾರೆ. ಆದರೆ ತಮ್ಮ ಸಮುದಾಯಗಳಿಂದ ಭಹಿಷ್ಕರಿಸುವ ಭಯದಿಂದಾಗಿ ಅಪರಾಧಿಗಳನ್ನು ಸಾರ್ವಜನಿಕವಾಗಿ ಎದುರಿಸಲು ಮುಂದೆ ಬರಲು ಹೆದರುತ್ತಾರೆ ಎಂದು ಆಕೆ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!