‘ಕರ್ನಾಟಕದ ಸಿಂಹ’ ಗಂಗಾಧರರಾವ್ ದೇಶಪಾಂಡೆಯವರ ಹೋರಾಟಗಳ ಬಗ್ಗೆ ತಿಳಿದರೆ ಹೆಮ್ಮೆಪಡುತ್ತೀರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕರ್ನಾಟಕದ ಗಂಗಾಧರರಾವ್ ಬಾಲಕೃಷ್ಣ ದೇಶಪಾಂಡೆ ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ರಾಷ್ಟ್ರೀಯ ಸ್ವಾತಂತ್ರ್ಯದ ಮಹತ್ತರವಾದ ಉದ್ದೇಶಕ್ಕಾಗಿ ಹೋರಾಡಲು ಗಾಂಧೀಜಿಯವರ ಕರೆಗೆ ಸ್ಪಂದಿಸಿದ ರಾಜ್ಯದ ಮಹೋನ್ನತ ಹೋರಾಟಗಾರರಲ್ಲಿ ಒಬ್ಬರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಲ್ಲಿ ದೇಶಪ್ರೇಮದ ಭಾವನೆಗಳನ್ನು ಹುಟ್ಟುಹಾಕುವಲ್ಲಿ ದೇಶಪಾಂಡೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅಪ್ರತಿಮ ಹೋರಾಟಗಳಿಂದ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಸಾಧನೆ ಮಾಡಿರುವ ಗಂಗಾಧರರಾವ್ ದೇಶಪಾಂಡೆ ‘ಕರ್ನಾಟಕದ ಸಿಂಹ’ ಎಂಬ ಅಭಿದಾನಕ್ಕೆ ಪಾತ್ರರಾದ್ದಾರೆ.
1871 31 ಮಾರ್ಚ್ 1ರಂದು ಬೆಳಗಾವಿಯ ಹುಡ್ಲಿಯಲ್ಲಿ ಜನಿಸಿದ ಗಂಗಾಧರರಾವ್ ಬಾಲಕೃಷ್ಣ ದೇಶಪಾಂಡೆ ಅವರು ಆರಂಭದಲ್ಲಿ ಸಾಮಾಜಿಕ ಸುಧಾರಣೆಗಳತ್ತ ಹೆಚ್ಚು ಒಲವು ತೋರಿದರು. ಅವರು ಲೋಕಮಾನ್ಯ ತಿಲಕ್ ಅವರನ್ನು ಭೇಟಿಯಾದಾಗಿನಿಂದ ಅವರ ಜೀವನವು ವಿಭಿನ್ನ ತಿರುವು ಪಡೆಯಿತು. 1920ರ ವರೆಗೆ ಗಂಗಾಧರರಾವ್ ಅವರು ತಿಲಕರು ಪ್ರತಿಪಾದಿಸಿದ್ದ ಸ್ವರಾಜ್ಯ ಹೋರಾಟದತ್ತ ಕರ್ನಾಟಕದ ಜನರನ್ನು ಮುನ್ನಡೆಸಿದರು.
ತಿಲಕರ ಮರಣ ಮತ್ತು ಗಾಂಧೀಜಿಯರ ಹೋರಾಟದ ಪ್ರವೇಶದ ನಂತರ, ದೇಶಪಾಂಡೆಯವರು ಗಾಂಧಿಯನ್ನು ʼತಿಲಕರ ದೃಷ್ಟಿ ಮತ್ತು ತತ್ತ್ವಶಾಸ್ತ್ರಗಳ ಉತ್ತರಾಧಿಕಾರಿʼಯಾಗಿ ನೋಡಿದರು. ಗಾಂಧಿಯವರು ದಂಡಿಯಲ್ಲಿ ಉಪ್ಪಿನ ಕಾಯಿದೆಯ ವಿರುದ್ಧ ಪ್ರತಿಭಟಿಸಿ ಉಪ್ಪಿನ ಸತ್ಯಾಗ್ರಹ ಆಂದೋಲನವನ್ನು ಆರಂಭಿಸಿದಾಗ, ದೇಶಪಾಂಡೆಯವರು ಕೂಡ ನಿಷಿದ್ಧ ಉಪ್ಪನ್ನು ಮಾರಾಟ ಮಾಡುವ ಮೂಲಕ ಕಾನೂನನ್ನು ಧಿಕ್ಕರಿಸಿದರು ಮತ್ತು ಅದೇ ದಿನ ಬಂಧಿಸಲ್ಪಟ್ಟರು.
1905-1906ರ ಸ್ವದೇಶಿ ಚಳವಳಿಯ ಸಮಯದಲ್ಲಿ ಅವರು ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಲು ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಗೆ ಜನರನ್ನು ಜಾಗೃತಗೊಳಿಸಿದರು. ಗಾಂಧಿಯವರ ಸ್ವಾವಲಂಬಿ ಭಾರತದ ದೃಷ್ಟಿಗೆ ಅನುಗುಣವಾಗಿ, ದಕ್ಷಿಣ ಭಾರತದಲ್ಲಿಯೇ ಮೊದಲನೆಯದಾಗಿ ಹುಡ್ಲಿಯಲ್ಲಿ ʼಖಾದಿ ಕೇಂದ್ರʼವನ್ನು ಸ್ಥಾಪಿಸುವಲ್ಲಿ ದೇಶಪಾಂಡೆ ಪ್ರಮುಖ ಪಾತ್ರ ವಹಿಸಿದ್ದರು. ಖಾದಿ ಆಂದೋಲನದ ಬಗ್ಗೆ ಹಳ್ಳಿ ಹಳ್ಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದ ಅವರನ್ನು ‘ಕರ್ನಾಟಕದ ಖಾದಿ ಭಗೀರಥ’ ಎಂದೂ ಕರೆಯುತ್ತಿದ್ದರು.
1924 ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ 29 ನೇ ಕಾಂಗ್ರೆಸ್ ಪ್ಲೀನರಿಯ ಪ್ರಮುಖ ಸಂಘಟಕ ಮತ್ತು ಯಶಸ್ಸಿನ ಹಿಂದಿನ ವ್ಯಕ್ತಿ ದೇಶಪಾಂಡೆ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ, ದೇಶದ ದಕ್ಷಿಣ ಭಾಗದ ಜನರನ್ನು ಒಟ್ಟುಗೂಡಿಸುವಲ್ಲಿ ಬೆಳಗಾವಿ ಪ್ರಮುಖ ಪಾತ್ರ ವಹಿಸಿತು. ಸರೋಜಿನಿ ನಾಯ್ಡು, ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಸೈಫುದ್ದೀನ್ ಕಿಚ್ಲೆವ್ ಮುಂತಾದ ದಿಗ್ಗಜರ ಉಪಸ್ಥಿತಿಯು ನಗರದಲ್ಲಿ ನಡೆದ ಈ ಐತಿಹಾಸಿಕ ಅಧಿವೇಶನಕ್ಕೆ ಮಹತ್ವವನ್ನು ತಂದುಕೊಟ್ಟಿತು. ಈ ಅಧಿವೇಶನಕ್ಕೆ ಸ್ಥಳೀಯ ವ್ಯಾಪಾರಿಗಳು ಮತ್ತು ಉದ್ಯಮಿಗಳಿಂದ ನಿಧಿ ಮತ್ತು ಬೆಂಬಲವನ್ನು ಗಳಿಸಿದ ದೇಶಪಾಂಡೆ ಅವರು 70,000 ಜನರು ಸೇರಿದ್ದ ಈ ಬೃಹತ್ ಸಭೆಗೆ ಕುಡಿಯುವ ನೀರಿನ ಪೂರೈಕೆಯನ್ನು ಏರ್ಪಡಿಸಲು ಅಪಾರ ಶ್ರಮ ವಹಿಸಿದರು. ಈ ಪ್ರದೇಶವು ತೀವ್ರ ನೀರಿನ ಬಿಕ್ಕಟ್ಟಿನಿಂದ ತತ್ತರಿಸುತ್ತಿದ್ದುದನ್ನು ಪರಿಗಣಿಸಿದರೆ ಇದು ಒಂದು ದೊಡ್ಡ ಸಾಧನೆಯಾಗಿದೆ.
1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬೆಳಗಾವಿ ಪ್ರಮುಖ ಪಾತ್ರವನ್ನು ವಹಿಸಿತು. ಪ್ರತಿಭಟನೆ ಮತ್ತು ಆಂದೋಲನದಲ್ಲಿ ತೊಡಗಿದ್ದ 5,000 ಕ್ಕೂ ಹೆಚ್ಚು ಜನರನ್ನು ಬೆಳಗಾವಿಯಲ್ಲಿ ಬಂಧಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ಐವರು ಸ್ವಾತಂತ್ರ್ಯ ಹೋರಾಟಗಾರರ ತಲೆಯ ಮೇಲೆ ಬ್ರಿಟಿಷ್ ಸರ್ಕಾರವು 5,000 ರೂ.,ನಗದು ಬಹುಮಾನವನ್ನು ಘೋಷಿಸಿತು. ವಿಪರ್ಯಾಸವೆಂದರೆ ಅವರೆಲ್ಲರೂ ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದರು. ಬೆಳಗಾವಿಯ ಜನರಲ್ಲಿ ಅಂತಹ ಹೋರಾಟದ ಛಲವಿತ್ತು. ಬೆಳಗಾವಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಪರಿಣಾಮಕಾರಿ ಸಂಘಟನೆ ಮತ್ತು ಅನುಷ್ಠಾನವು ‘ಕರ್ನಾಟಕದಲ್ಲೇ ಮಾದರಿ’ ಎಂದು ಕರೆಯಲ್ಪಟ್ಟಿತು ಮತ್ತು ಇದು ಇಡೀ ದೇಶದಲ್ಲಿ ಜನಪ್ರಿಯವಾಯಿತು.
ದೇಶಪಾಂಡೆಯವರ ಶೌರ್ಯ, ಅವರ ವಾಕ್ಚಾತುರ್ಯ, ಅದ್ಭುತ ಕಲಿಕೆ, ಕಠಿಣ ಜೀವನ ಮತ್ತು ಅವರ ಉನ್ನತ ವ್ಯಕ್ತಿತ್ವವು ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಹೊತ್ತಿಗೆಯ ಪುಟಗಳಲ್ಲಿ ವಿಶಿಷ್ಟವಾದ ಮತ್ತು ಉನ್ನತ ಸ್ಥಾನವನ್ನು ನೀಡಿದೆ. ಲೋಕಮಾನ್ಯ ತಿಲಕರ ಕಟ್ಟಾ ಶಿಷ್ಯ ಮತ್ತು ಗಾಂಧೀಜಿಯ ಕಟ್ಟಾ ಅನುಯಾಯಿಯು ಸ್ವತಂತ್ರ ಭಾರತಕ್ಕಾಗಿ ತನ್ನ ಜೀವನದ 60 ವರ್ಷಗಳನ್ನು ಹೋರಾಡಿದರು. ದೇಶಪಾಂಡೆಯವರು 30 ಜುಲೈ 1960 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!