Wednesday, June 29, 2022

Latest Posts

ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ನೌಕೆಯ ಮಾದರಿ ಸೇರ್ಪಡೆ

ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ ಒಂದಾಗಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಶಿವಾಲಿಕ್ ಯುದ್ಧ ನೌಕೆಯ ಮಾದರಿ, ಆ್ಯಂಟಿ ಏರ್‌ಕ್ರಾಫ್ಟ್ ಮಿಷಿನ್ ಗನ್ ಹಾಗೂ ಒಂದು ಸಬ್‍ಮೆರಿನ್ ಬಂದಿಳಿದಿದೆ.
ವಿಶಾಖಪಟ್ಟಣ ನೌಕಾ ನೆಲೆಯಿಂದ ಬೃಹತ್ ಚಕ್ರದ ಲಾರಿಯಲ್ಲಿ ವಿಶೇಷ ಅನುಮತಿಯೊಂದಿಗೆ ಈ ಪರಿಕರಗಳನ್ನು ತರಲಾಗಿದ್ದು, ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಮ್ಯೂಸಿಯಂ ಆವರಣದಲ್ಲಿ ಸೂಕ್ತ ಸ್ಥಳದಲ್ಲಿ ಇದನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುತ್ತದೆ.
ಈ ಮ್ಯೂಸಿಯಂನ ಒಳಭಾಗ ಇಂಡೋ-ಪಾಕ್, ಇಂಡೋ-ಚೈನಾ ಯುದ್ಧ ಮತ್ತು ವಿವಿಧ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಸೇನಾ ನಿವೃತ್ತಿಯಾಗಿರುವ ಭೂ ಸೇನೆಗೆ ಸೇರಿದ ‘ಹಿಮ್ಮತ್’ ಹೆಸರಿನ ಯುದ್ಧ ಟ್ಯಾಂಕರ್, ವಾಯು ಸೇನೆಗೆ ಸೇರಿದ ಮಿಗ್-20 ಶ್ರೇಣಿಯ ಯುದ್ಧ ವಿಮಾನಗಳಿವೆ.
ಆದರೆ ನೌಕಾ ಪಡೆಗೆ ಸೇರಿದ ಯುದ್ಧ ನೌಕೆಯ ಒಂದು ಆ್ಯಂಕರ್ ಮಾತ್ರವೇ ಇದ್ದು, ಯುದ್ಧ ನೌಕೆಯ ಕೊರತೆ ಇತ್ತು. ಆದರೆ ಇದೀಗ ಶಿವಾಲಿಕ್ ಯುದ್ಧ ನೌಕೆ, ಸಬ್‍ಮೆರಿನ್ ಮಾದರಿ ಹಾಗೂ ಆ್ಯಂಟಿ ಏರ್‌ಕ್ರಾಫ್ಟ್ ಗನ್ ಕೂಡ ಅಳವಡಿಕೆಯಾಗುತ್ತಿದೆ. ಇದರಿಂದಾಗಿ ಜನರಲ್ ತಿಮ್ಮಯ್ಯ ಅವರಂತಹ ಮೇರು ವ್ಯಕ್ತಿತ್ವದ ಸೇನಾಧಿಕಾರಿ ಹುಟ್ಟಿದ ಸನ್ನಿಸೈಡ್ ನಿವಾಸ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಹಾಗೂ ಕೊಡಗಿನ ವೀರ ಸೈನಿಕ ಪರಂಪರೆಗೂ ಮತ್ತೊಂದು ಮೆರುಗು ತುಂಬಲಿದೆ.
ಸೇನಾನಿಯ ಕೊಡುಗೆ: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾಗಿರುವ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರ ಸಂಬಂಧಿಯಾಗಿರುವ ನೌಕಾ ದಳದ ಅಧಿಕಾರಿ ರಿಯರ್ ಎಡ್ಮಿರಲ್ ಐಚೆಟ್ಟಿರ ಉತ್ತಪ್ಪ ಅವರು ಕಳೆದ 4 ತಿಂಗಳ ಹಿಂದೆ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿದ್ದರು. ಈ ಸಂದರ್ಭ ಕರ್ನಲ್ ಸುಬ್ಬಯ್ಯ ಅವರು ಮ್ಯೂಸಿಯಂನಲ್ಲಿ ನೌಕಾ ಪಡೆಗೆ ಸೇರಿದ ಆ್ಯಂಕರ್ ಮಾತ್ರವೇ ಇದ್ದು, ಒಂದು ಯುದ್ಧ ನೌಕೆ ಇಲ್ಲದಿರುವ ಬಗ್ಗೆ ರಿಯರ್ ಎಡ್ಮಿರಲ್ ಐಚೆಟ್ಟಿರ ಉತ್ತಪ್ಪ ಅವರ ಗಮನ ಸೆಳೆದಿದ್ದರು.
ಆ ವೇಳೆ ಒಂದು ಯುದ್ದ ನೌಕೆ ಮಾದರಿಯನ್ನು ಕೊಡುಗೆಯಾಗಿ ನೀಡುವುದಾಗಿ ನೌಕಾ ಸೇನಾಧಿಕಾರಿ ಉತ್ತಪ್ಪ ಭರವಸೆ ನೀಡಿದ್ದರು.
ಬಳಿಕ ಮೇಲಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಿದ ರಿಯರ್ ಎಡ್ಮಿರಲ್ ಐಚೆಟ್ಟಿರ ಉತ್ತಪ್ಪ, ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ವಿಶೇಷವಾಗಿ ನಿರ್ಮಿಸಿದ 24 ಅಡಿ ಉದ್ದದ “ಶಿವಾಲಿಕ್” ಯುದ್ಧ ನೌಕೆ, 8 ಅಡಿ ಉದ್ದದ ಸಬ್‍ಮೆರಿನ್, ಹಾಗೂ ನೌಕಾ ಸೇನೆಯ ಸೇವೆಯಿಂದ ನಿವೃತ್ತಿಯಾಗಿರುವ ಆ್ಯಂಟಿ ಏರ್‌ಕ್ರಾಫ್ಟ್ ಮಿಷಿನ್ ಗನ್ ಅನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಿದ್ದಾರೆ. ಇವುಗಳ ಒಟ್ಟು ಮೊತ್ತ ಅಂದಾಜು 20 ಲಕ್ಷ ರೂ.ಗಳಾಗಿದೆ.
ಒಂದೆರಡು ತಿಂಗಳಲ್ಲಿ ಲೋಕಾರ್ಪಣೆ:ಈ ನೌಕಾ ಸೇನೆಯ ಮಾದರಿ ಯುದ್ಧ ನೌಕೆ, ಸಬ್‍ಮೆರಿನ್ ಹಾಗೂ ಗನ್ ಅನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ ನಂಜಪ್ಪ ಅವರು ಮಾಹಿತಿ ನೀಡಿದ್ದಾರೆ.
ನೌಕಾ ಸೇನೆಯ ಎಡ್ಮಿರಲ್ ಇನ್ ಚೀಫ್(ವೆಸ್ಟರ್ನ್ ಕಮಾಂಡ್) ಅವರು ಈ ಕಾರ್ಯ ನೆರವೇರಿಸಲಿದ್ದಾರೆ. ಆ ಮೂಲಕ ಅಧಿಕೃತವಾಗಿ ಯುದ್ಧ ನೌಕೆ, ಸಬ್‍ಮೆರಿನ್ ಹಾಗೂ ಆ್ಯಂಟಿ ಏರ್‌ಕ್ರಾಫ್ಟ್ ಗನ್ ಫೋರಂಗೆ ಹಸ್ತಾಂತರವಾಗಲಿದೆ ಎಂದು ಮಾಹಿತಿ ನೀಡಿದರು.
ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ನೌಕಾ ಪಡೆಗೆ ಸೇರಿದ ಯುದ್ಧ ನೌಕೆಯ ಕೊರತೆ ಇತ್ತು. ರಿಯರ್ ಎಡ್ಮಿರಲ್ ಐಚೆಟ್ಟಿರ ಉತ್ತಪ್ಪ ಅವರು ಮ್ಯೂಸಿಯಂಗೆ ಭೇಟಿ ನೀಡಿದಾಗ ಕರ್ನಲ್ ಸುಬ್ಬಯ್ಯ ಮನವಿಯಂತೆ ಯುದ್ಧ ನೌಕೆಯ ಮಾದರಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ವಿಶಾಖಪಟ್ಟಣದಿಂದ ಈ ಮಾದರಿಗಳನ್ನು ತರಲಾಗಿದ್ದು, ಅದರ ನಿರ್ಮಾಣ ಹಾಗೂ ಸಾಗಾಟ ವೆಚ್ಚವನ್ನು ನೌಕಾ ಸೇನಾಧಿಕಾರಿ ಐಚೆಟ್ಟಿರ ಉತ್ತಪ್ಪ ಅವರೇ ಭರಿಸಿದ್ದಾರೆ. ಈಗಾಗಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಾದರಿ ಯುದ್ಧ ನೌಕೆ ಮತ್ತು ಸಬ್ ಮೆರಿನ್ ಹಾಗೂ ಏರ್‌ಕ್ರಾಫ್ಟ್ ಗನ್ ಅನ್ನು ಅಳವಡಿಸಲಾಗುತ್ತದೆ. ಈಗಾಗಲೇ ಮ್ಯೂಸಿಯಂನ ಒಳಭಾಗದಲ್ಲಿ ಶಿವಾಲಿಕ್ ಯುದ್ಧ ನೌಕೆಯ ಮಾದರಿ ಇಡಲಾಗಿದೆ ಎಂದು ಮೇಜರ್ ನಂಜಪ್ಪ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss