ಕೊಡಗಿಗೆ ಬಂದು ಕಾಫಿ ಕೊಯ್ದು ಖುಷಿಪಟ್ಟ ಜರ್ಮನಿಯರು!

ಹೊಸದಿಗಂತ ವರದಿ, ಚೆಟ್ಟಳ್ಳಿ(ಕೊಡಗು):

ಕೊಡಗಿನಲ್ಲಿ ಇದೀಗ ಕಾಫಿ ಕೊಯ್ಲಿನ ಸಮಯ. ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಅನುಭವಿಸುತ್ತಿರುವ ಕೊಡಗಿಗೆ ಜಿಲ್ಲೆಯ ವಿವಿಧೆಡೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ, ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಿಂದಲೂ ಕಾರ್ಮಿಕರು ಅಗಮಿಸುವುದಿದೆ.

ಆದರೆ ಇದೀಗ ಜರ್ಮನಿಯ ಯುವಕ ಯುವತಿಯರ ತಂಡ ಕೂಡಾ ಕೊಡಗಿಗೆ ಆಗಮಿಸಿ ಕಾಫಿ ಕೊಯ್ಲಿನಲ್ಲಿ ಭಾಗಿಯಾಗಿದೆ.
ಹೌದು; ಜರ್ಮನಿಯಿಂದ ಭಾರತಕ್ಕೆ ಆಗಮಿಸಿದ ಐವರು ವಿದೇಶಿಯರು ಕೊಡಗಿಗೆ ಬಂದು ಕಾಫಿ ಕೊಯ್ಲಿನ ಅನುಭವ ಪಡೆದಿದ್ದಾರೆ.
ಹಾಗೆಂದು ಇವರು ಕಾಫಿ ಕೊಯ್ಲಿಗೆ ಕಾರ್ಮಿಕರಾಗಿ ಬಂದವರೆಂದುಕೊಳ್ಳಬೇಡಿ. ಇವರು ಬಂದಿರುವುದು ಕಾಫಿ ಕೊಯ್ಲಿನ ಅನುಭವ ಪಡೆಯುವುದಕ್ಕಾಗಿ!

ಜರ್ಮನಿಯಿಂದ ಮೈಸೂರಿಗೆ ಆಗಮಿಸಿದ ಕಾಯ, ಜೋಹಾನಿ, ಲಿನ್ಯೂಸ್, ಲೂಯಿಸ್, ಜಾಸ್ಮಿನ್ ಎಂಬ ಐವರು ಕೊಡಗಿಗೆ ಬಂದಿಳಿದರು.
ಚೆಟ್ಟಳ್ಳಿಯ ಮುಳ್ಳಂಡ ಅಂಜನ್ ಮುತ್ತಪ್ಪ ಅವರನ್ನು ಸಂಪರ್ಕಿಸಿದ ಈ ತಂಡ ಅವರ ಕಾಫಿ ತೋಟದಲ್ಲೆಲ್ಲ ಸುತ್ತಾಡಿ, ಅಂಜನ್‍ನಿಂದ ಕಾಫಿ ವೈಶಿಷ್ಯದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಬೆಳಗಿನಿಂದ ಮಧ್ಯಾಹ್ನದವರೆಗೆ ಕಾಫಿ ಕೊಯ್ದು ಆನಂದಿಸಿದರು.

ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ವಿದೇಶಿಗರು, ಕೊಡಗಿನ ಹಸಿರು ಪರಿಸರದಲ್ಲಿನ ಕಾಫಿಯನ್ನು ಕೊಯ್ದು ತುಂಬಾ ಆನಂದಿಸಿದ್ದೇವೆ. ಇದು ನಮಗೆ ಹೊಸ ಅನುಭವವನ್ನು ನೀಡಿದೆ ಎಂದು ತಿಳಿಸಿದರು.

ಕೊಡಗಿನ ಕಾಫಿಯನ್ನು ಸವಿದ ಅವರು, ಕೊಡಗಿನ ಕಾಫಿ ಹಿಂದೆ ಹಲವರ ಪರಿಶ್ರಮವಿದೆ. ಇಲ್ಲಿನ ಪರಿಸರ ಆಕರ್ಷಣೀಯವಾಗಿದ್ದು, ಮತ್ತೆ ಬರುವುದಾಗಿ ಹೇಳಿ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!