ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಕುಶಾಲನಗರ:
ಒಂದೆಡೆ ಬೆಳೆದ ಬೆಳೆಗೆ ದೊರಕದ ಮಾರುಕಟ್ಟೆ, ಮತ್ತೊಂದೆಡೆ ರೋಗಬಾಧೆ. ಇವೆರಡರ ನಡುವೆ ಈ ಬಾರಿ ಶುಂಠಿ ಬೆಳೆದ ರೈತರ ಬದುಕು ಅಯೋಮಯ ಎಂಬಂತಾಗಿದೆ.
ಜಿಲ್ಲೆಯ ಅನೇಕ ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಕಳೆದ ಮೂರು ವರ್ಷಗಳಿಂದ ವಾಣಿಜ್ಯ ಬೆಳೆಯಾದ ಶುಂಠಿ ಬೇಸಾಯ ಮಾಡುತ್ತಾ ಬರುತ್ತಿದ್ದಾರೆ. ಆದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬೇಸಾಯ ಮಾಡಿದರೂ ಈ ಬಾರಿ ಶುಂಠಿಗೆ ಬೆಲೆ ಕುಸಿತದ ಜೊತೆಗೆ ಕೊಳೆ ರೋಗ ಮತ್ತು ಕಡ್ಡಿ ರೋಗ ಹೆಚ್ಚಾಗಿ ರೈತರು ಅತಂಕ ಪಡುವ ಪ್ರಸಂಗ ಎದುರಾಗಿದೆ.
ರೋಗ ಭಯದಿಂದ ಶುಂಠಿ ಬೆಳೆಯನ್ನು ಕೀಳಲು ಪ್ರಾರಂಭ ಮಾಡಿದರರೂ ಮಾರುಕಟ್ಟೆಯವರು ಕೊಳ್ಳಲು ಸಿದ್ದರಿಲ್ಲದ ಕಾರಣ ರೈತರು ಚಿಂತಾಕ್ರಾಂತರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ಒಂದಲ್ಲ ಒಂದು ಸಮಸ್ಯೆಗಳನ್ನು ರೈತರು ಎದುರಿಸಿಕೊಂಡು ಬರುತ್ತಿದ್ದು, ಇದರ ನಡುವೆ ಕೊರೋನಾ ಹಿನ್ನೆಲೆಯಲ್ಲಿ ಶುಂಠಿ ಮಾರುಕಟ್ಟೆಗಳು ಸಮರ್ಪಕವಾಗಿ ಕಾರ್ಯಾರಂಭ ಮಾಡದೆ ಬೆಲೆಯಲ್ಲಿ ಏರಿಳಿತ, ವರ್ಷಗಳು ಕಳೆದಂತೆ ಶುಂಠಿ ಬೆಳೆಗೆ ರೋಗ ಬಾಧೆ ಹೆಚ್ಚಾಗುತ್ತಿರುವುದರಿಂದ ಶುಂಠಿಯನ್ನು ಉತ್ತಮವಾಗಿ ಬೆಳೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನೂರಾರು ರೈತರು. ಕಳೆದ ಸಾಲಿಗಿಂತ ಈ ಬಾರಿ ಶುಂಠಿ ಬೆಳೆಗೆ ಉತ್ತಮವಾದ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಅಧಿಕ ಹಣವನ್ನು ಶುಂಠಿ ಬೀಜಕ್ಕೆ, ಭೂಮಿಗೆ ಮತ್ತು ನೀರಿನ ವ್ಯವಸ್ಥೆಗೆ, ಗೊಬ್ಬರಕ್ಕೆ ಖರ್ಚು ಮಾಡಿದ್ದಾರೆ. ಆದರೆ ಶುಂಠಿ ಗದ್ದೆಗಳಲ್ಲಿ ಬೆಳೆ ನೋಡಲು ಚೆನ್ನಾಗಿದ್ದರೂ ಅದರ ಗಿಡಗಳು ದಿನಗಳೆದಂತೆ ಒಣಗಿ ನಂತರ ಇಡೀ ಜಮೀನಿನಲ್ಲಿ ರೋಗ ಹರಡಲು ಪ್ರಾರಂಭವಾಗಿದೆ.
ಈ ಬಾರಿ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಜಿಲ್ಲೆಯ ರೈತರು ಶುಂಠಿ ಬೆಳೆ ಬೆಳೆದಿದ್ದಾರೆ. ಆದರೆ ಶುಂಠಿ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ದೊರಕುತ್ತಿಲ್ಲ .
ಅಂತರರಾಜ್ಯ ಮಾರುಕಟ್ಟೆ ಯಲ್ಲೂ ಕಳೆದ ನಾಲ್ಕು ವರ್ಷಗಳ ಬೆಲೆ ಇದುವರೆಗೂ ಬಂದಿಲ್ಲ . ಕಳೆದ ನಾಲ್ಕು ವರ್ಷಗಳ ಹಿಂದೆ 60ಕೆ.ಜಿ.ತೂಕದ ಒಂದು ಚೀಲ ಶುಂಠಿಗೆ ಮೂರು ಸಾವಿರದಿಂದ ನಾಲ್ಕು ಸಾವಿರ ರೂ. ದರವಿತ್ತು.. ಆದರೆ ಕಳೆದ ಎರಡೂ ವರ್ಷಗಳಿಂದಿ ಹೊಸ ಶುಂಠಿಗೆ ರಾಜ್ಯ ಮತ್ತು ಅಂತರರಾಜ್ಯ ಮಾರುಕಟ್ಟೆಯಲ್ಲಿ ಕೇವಲ 500 ರಿಂದ 550 ರವರೆಗೆ ಮಾತ್ರ ಬೆಲೆ ಸೀಗುತ್ತಿದೆ. ಹಳೆಯ ಶುಂಠಿ ಗೆ 1200-1300 ರಷ್ಟು ಬೆಲೆ ಇದೆ.
ಈ ಬಾರಿ ಅನೇಕ ಕಷ್ಟನಷ್ಟಗಳ ನಡುವೆ ಜಿಲ್ಲೆಯ ರೈತರು ಶುಂಠಿ ಬೆಳೆಯನ್ನು ಬೆಳೆದರೂ ಸಹ ಬೆಲೆ ತೀರಾ ಕಡಿಮೆ ಇರುವುದರ ಜೊತೆಗೆ ರೋಗ ಬಾಧೆಯೂ ಕಾಡುತ್ತಿರುವುದರಿಂದ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬಿಡುವ ಬದಲು ಕಿತ್ತು ಹಾಕುವುದೇ ಸೂಕ್ತ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.
ಬೆಳೆಯನ್ನು ಕೀಳದಿದ್ದರೆ ರೋಗ ಹೆಚ್ಚಾಗಿ ಎಲ್ಲಾ ಪ್ರದೇಶಕ್ಕೆ ಹರಡುವುದರಿಂದ ಈ ಬಾರಿ ಕಡಿಮೆ ಬೆಲೆಯಾದರೂ, ಬಂದಷ್ಟು ಬರಲಿ ಎಂದು ಶುಂಠಿ ಬೆಳೆಯನ್ನು ಕೀಳಲು ಪ್ರಾರಂಭಿಸಿದ್ದಾರೆ. ರೋಗದ ಶುಂಠಿ ಕಿತ್ತ ಗದ್ದೆಗಳಲ್ಲಿ ಬೇರೆ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಸಕ್ತ ಒಂದು ಚೀಲ ಶುಂಠಿಗೆ ಕೇವಲ 500 ರೂ.ದರವಿದ್ದು,ಮಳೆಯ ನಡುವೆಯೂ ಶುಂಠಿ ಬೆಳೆಯನ್ನು ಕಿತ್ತು ಶುಂಠಿ ತೊಳೆಯುವ ಯಂತ್ರದ ಮೂಲಕ ತೊಳೆದು ಮೂಟೆಗಳಲ್ಲಿ ತುಂಬಿ ಹೊರ ರಾಜ್ಯದ ಮಾರುಕಟ್ಟೆಗೆ ಸಾಗಾಣಿಕೆ ಮಾಡುತ್ತಿರುವುದು ಕಂಡುಬರುತ್ತಿದೆ.. ಆದರೆ ಬೆಲೆಯ ಕುಸಿತದಿಂದಾಗಿ ತಾವು ಬೆಳೆಗೆ ಮಾಡಿದ ಖರ್ಚು ಕೂಡ ದೊರಕುತ್ತಿಲ್ಲ ಎಂದು ಶುಂಠಿ ಬೆಳೆದ ಅನೇಕ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಾರಿ ಶುಂಠಿ ಬೆಳೆಗೆ ಹೆಚ್ಚಾಗಿ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖರೀದಿದಾರರು ಶುಂಠಿ ಖರೀದಿಸಲು ಸ್ವಲ್ಪ ಮಟ್ಟಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.