ಹೊಸ ದಿಗಂತ ಆನ್ ಲೈನ್ ಡೆಸ್ಕ್:
ತಂದೆಗೆ ಕೊರೋನಾ ಸೋಂಕು ತಗುಲಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇತ್ತ ಮಗಳು ತಂದೆಗೆ ನೀರು ಕುಡಿಸಲು ಹೊರಟರೆ, ತಾಯಿಯೇ ಮಗಳನ್ನು ತಡೆದಿರುವ ಅಮಾನವೀಯ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ವಿಜಯವಾಡದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿ ಕೊರೋನಾ ಸೋಂಕು ತಗುಲಿದ ಬಳಿಕ ಶ್ರೀಕಾಕುಳಂನಲ್ಲಿರುವ ತನ್ನ ಮನೆಗೆ ತೆರಳಿದ್ದಾರೆ. ಆದರೆ ಆ ವ್ಯಕ್ತಿಯನ್ನು ಗ್ರಾಮದ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಲ್ಲದೆ ಆತನ ಮನೆಯಲ್ಲಿ ಸೇರಿಸಲು ಹೆಂಡತಿ ಕೂಡ ಒಪ್ಪಿಗೆ ನೀಡಿಲ್ಲ. ಹೀಗಾಗಿ ಗ್ರಾಮದ ಹೊರಭಾಗದ ಮೈದಾನದಲ್ಲಿ ಗುಡಿಸಲು ಕಟ್ಟಿಕೊಂಡು ಉಳಿಯುತ್ತಾರೆ.
ನರಳಾಡುತ್ತಿದ್ದ ಕೊರೋನಾ ಸೋಂಕಿತ ತಂದೆಯನ್ನು ನೋಡಿ 17 ವರ್ಷದ ಮಗಳು ನೀರಿನ ಬಾಟಲ್ ಹಿಡಿದು ತಂದೆಗೆ ನೀರು ಕುಡಿಸಲು ಮುಂದಾದಾಗ ಆಕೆಗೂ ಸೋಂಕು ತಗಲಬಹುದು ಎಂದು ತಾಯಿ ಆಕೆಯನ್ನು ಹಿಂಬದಿಯಿಂದ ಹಿಡಿದುಕೊಳ್ಳುತ್ತಾಳೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಂಥವರನ್ನೂ ಈ ದೃಶ್ಯ ಮನಕಲಕುವಂತೆ ಮಾಡುತ್ತದೆ.
ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲದೆ ಆ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಲಿಲ್ಲ. ಹೀಗಾಗಿಯೇ ಅವರು ಮೃತಪಟ್ಟಿದ್ದಾರೆ. ಅವನ ಕುಟುಂಬಕ್ಕೂ ಸಹ ಕರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ತಿಳಿಸಿದ್ದಾರೆ.