ಹೊಸದಿಗಂತ ವರದಿ, ಬಳ್ಳಾರಿ:
ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ನಾನೇ ಸಿಎಂ ಬೊಮ್ಮಾಯಿ ಅವರಿಗೆ ಹೇಳಿರುವೆ. ಆದರೆ, ನಾನಾ ಕಾರಣಗಳಿಂದ ಆಗಿಲ್ಲ, ಮುಂದೆ ಆಗಬಹುದು ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯನಗರ ಹಾಗೂ ಬಳ್ಳಾರಿ ಎರಡೂ ಜಿಲ್ಲೆಗಳ ಉಸ್ತುವಾರಿ ಇರುವುದರಿಂದ ಒಂದಿಷ್ಟು ಒತ್ತಡ ಇರಲಿದೆ, ಬಳ್ಳಾರಿ ಜಿಲ್ಲೆ ಉಸ್ತುವಾರಿ ಬಿಟ್ಟುಕೊಡಿ ಎಂದರೆ ಈಗಲೇ ನಾನು ಸಿದ್ದನಿರುವೆ.
ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ನಾನು ಸಮರ್ಥವಾಗಿ ನನ್ನ ಕೆಲಸ ಮಾಡುತ್ತಿರುವೆ. ಬಳ್ಳಾರಿಯಲ್ಲಿ ಸಭೆಗಳನ್ನು ಮಾಡಿದರಷ್ಟೆ ಜಿಲ್ಲೆ ಅಭಿವೃದ್ದಿ ಬಗ್ಗೆ ಆಸಕ್ತಿಯಿದೆ ಎನ್ನುವದಲ್ಲ. ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿರುವೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ಭತ್ತ, ಹತ್ತಿ, ಮೆಣಸಿನಕಾಯಿ, ಮೆಕ್ಕೆ ಜೋಳ ಸೇರಿ ನಾನಾ ಬೆಳೆಗಳು ಹಾಳಾಗಿವೆ. ಈ ಕುರಿತು ನಮ್ಮ ಅಧಿಕಾರಿಯ ಸರ್ವೇ ಕಾರ್ಯ ನಡೆಸಿದ್ದಾರೆ. ನಂತರ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
ನಮ್ಮ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಅವರು ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ನಮ್ಮ ಪಕ್ಷ ಬೆಂಬಲಿತ ಸದಸ್ಯರೇ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿದ್ದಾರೆ. ಇದಕ್ಕೆ ಇತ್ತಿಚೆಗೆ ನಡೆದ ಜನ ಸ್ವರಾಜ್ ಯಾತ್ರೆಗೆ ಸಾಕ್ಷಿ ಎಂದರು.
ಅಭ್ಯರ್ಥಿಗಳ ಆಯ್ಕೆ ವರೀಷ್ಟರಿಗೆ ಬಿಟ್ಟದ್ದು, ಅಭ್ಯರ್ಥಿ ವೈ.ಎಂ.ಸತೀಶ್ ಅವರ ಕುಟುಂಬದವರು ಮಾಡಿದ ಸಮಾಜ ಸೇವೆ ಅನನ್ಯವಾಗಿದೆ. ಇದನ್ನೇ ಪರಿಗಣಿಸಿ ಟಿಕೆಟ್ ನೀಡಿರಬಹುದು ಎಂದರು.
ಬಿಜೆಪಿಯವರೇ ಕೊಂಡಯ್ಯನವರಿಗೆ ಬೆಂಬಲಿಸುತ್ತಾರೆ ಎನ್ನುವ ಆರೋಪ ಸುಳ್ಳು, ನಮ್ಮ ಅವರ ಸ್ನೇಹ ಬೇರೆ , ಚುನಾವಣೆ ವೇಳೆ, ನಮ್ಮ ಅಭ್ಯರ್ಥಿ ಪರವಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಅಸಮಧಾನಿತರ ಸಂಖ್ಯೆ ಹೆಚ್ಚಿದೆ. ಅವರ ಪಕ್ಷದ ಶಾಸಕರೇ ಅಭ್ಯರ್ಥಿ ಕೊಂಡಯ್ಯ ಅವರಿಗೆ ಟಿಕೆಟ್ ಬೇಡ ಎಂದಿರುವುದೇ ಕೈ ಪಾಳೆಯದಲ್ಲಿ ಅಸಮಾಧಾದ ಹೊಗೆ ಎಷ್ಟಿದೆ ಎಂಬುದು ತಿಳಿಯಲಿದೆ. ಇದೇ ನಮ್ಮ ಅಭ್ಯರ್ಥಿ ಸತೀಶ್ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.