ಗ್ಲೋಬಲ್‌ ಸ್ಟಾರ್ಟ್‌ಅಪ್‌ ಚಾಲೆಂಜ್‌: ‘ವೆಂಚುರೈಸ್‌’ ಸ್ಪರ್ಧೆಗೆ ಸಚಿವ ನಿರಾಣಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು: ಉತ್ಪಾದನೆ ಮತ್ತು ಸುಸ್ಥಿರತೆ-ಸಂಬಂಧಿತ ವಲಯಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಬೆಂಬಲಿಸುವ ‘ವೆಂಚುರೈಸ್‌’ ಸ್ಪರ್ಧೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ.

‘ವೆಂಚುರೈಸ್‌’ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ ಆರ್. ನಿರಾಣಿ, ಉತ್ಪಾದನೆ ಮತ್ತು ಸಂಬಂಧಿತ ವಲಯಗಳಲ್ಲಿನ ಸ್ಟಾರ್ಟ್ಅಪ್‌ಗಳಿಗೆ ರಾಜ್ಯವನ್ನು ಆದ್ಯತೆಯ ತಾಣವಾಗಿ ರೂಪಿಸುವುದು ನಮ್ಮ ಆದ್ಯತೆ. ಉದ್ಯಮಿಗಳಿಗೆ ಪೂರಕ ವಾತಾವರಣ ಕಲ್ಪಿಸಲು ಅತ್ಯುತ್ತಮ ಮೂಲಸೌಕರ್ಯ ನಿರ್ಮಿಸಲು ನಮ್ಮ ಸರ್ಕಾರ ಬದ್ಧ ಎಂದರು.

ಬೆಂಗಳೂರಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ‘ವೆಂಚುರೈಸ್- ಗ್ಲೋಬಲ್ ಸ್ಟಾರ್ಟ್‌ಅಪ್ ಪಿಚ್ ಚಾಲೆಂಜ್’ ಆಯೋಜಿಸಲಾಗಿದೆ ಎಂದು ಹೇಳಿದರು.
ಅಮೆಜಾನ್‌ ಪ್ರಾಯೋಜಿತ ಈ ‘ಸ್ಟಾರ್ಟ್‌ಅಪ್ ಪಿಚ್ ಚಾಲೆಂಜ್‌’ನ ಸುಗಮ ನಿರ್ವಹಣೆಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜತೆ ಟಿಐಇ ಕೈ ಜೋಡಿಸಿದೆ.
ಮುಂದಿನ 2 ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ಸ್ಪರ್ಧೆಯ ಮೊದಲ ಹಂತ ಆನ್‌ಲೈನ್ ಅರ್ಜಿ ಸಲ್ಲಿಕೆ. ಆನ್‌ಲೈನ್ ಪಿಚಿಂಗ್ ಎರಡನೇ ಭಾಗವಾದರೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಪ್ರಪಂಚದಾದ್ಯಂತ 2000ಕ್ಕೂ ಹೆಚ್ಚು ಅರ್ಜಿಗಳನ್ನು ನಿರೀಕ್ಷಿಸಲಾಗಿದೆ. 2022ರ ಸೆಪ್ಟೆಂಬರ್‌ 1ರಿಂದ ಸೆಪ್ಟೆಂಬರ್‌ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಳಾಸ: https://investkarnataka.co.in/gim2022/venturise
ಸ್ಪರ್ಧೆಯ ವಿಜೇತರಿಗೆ 100,000 ಡಾಲರ್‌ ನಗದು ಬಹುಮಾನ ಘೋಷಿಸಲಾಗಿದೆ.
ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಇನ್ವೆಸ್ಟ್‌ ಕರ್ನಾಟಕ ಫೋರಂನ ಸಿಓಓ ಬಿ.ಕೆ. ಶಿವಕುಮಾರ್‌, ಟಿಐಇ ಗ್ಲೋಬಲ್‌ ಮುಖ್ಯಸ್ಥ ಬಿಜೆ ಅರುಣ್‌, ಟಿಐಇ ಬೆಂಗಳೂರಿನ ಅಧ್ಯಕ್ಷ ಮದನ್‌ ಫಡ್ಕಿ, ಅಮೇಜಾನ್‌ ಇಂಡಿಯಾದ ಪಬ್ಲಿಕ್‌ ಪಾಲಿಸಿ ವಿಭಾಗದ ಮುಖ್ಯಸ್ಥ ಚೇತನ್‌ ಕೃಷ್ಣಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!