ಹೊಸ ದಿಗಂತ ವರದಿ, ಅಂಕೋಲಾ :
ಅಕ್ರಮ ಜಾನುವಾರುಗಳ ಸಾಗಟ ಜಾಲವನ್ನು ಪತ್ತೆ ಹಚ್ಚಿ ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರು ಹಾಗೂ ವಾಹನಗಳನ್ನು ವಶಪಡಿಕೊಂಡು ಬಿಸಿ ಮುಟ್ಟಿಸುವ ಕೆಲಸವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಆಗಾಗ ನಡೆಸುತ್ತಿದ್ದರೂ ಜಾನುವಾರುಗಳ ಸಾಗಟ ಮಾತ್ರ ಯಾವುದೇ ಭಯವಿಲ್ಲದೇ ಮುಂದುವರಿದಿದ್ದು ಮಂಗಳವಾರ ಕುಮಟಾದ ಹೊಳೆಗದ್ದೆ ಬಳಿ 13 ಕೋಣ ಮತ್ತು 9 ಎಮ್ಮೆ ಸೇರಿದಂತೆ 22 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಜಾನುವಾರುಗಳನ್ನು ಮಹಾರಾಷ್ಟ್ರದ ಕೋಲಾಪುರದಿಂದ ಪಾಂಡಿಚೆರಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಬಂದಿಸಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣ ಸೇರಿದಂತೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ
ಒಟ್ಟು 49 ಜಾನುವಾರುಗಳ ರಕ್ಷಣೆ ಮಾಡಿದಂತಾಗಿದೆ.
ಇತ್ತೀಚೆಗೆ ಯಲ್ಲಾಪುರ ಬಳಿ 10 ಕೋಣಗಳನ್ನು , ಅಂಕೋಲಾದ ಕೊಡಸಣಿ ಬಳಿ 17 ಕೋಣಗಳನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು ಹಾಗೂ ಈ ಜಾಲದಲ್ಲಿ ಅಂಕೋಲಾದ ಗ್ರಾಮೀಣ ಭಾಗದ ವ್ಯಕ್ತಿಯೋರ್ವನ ಬಂಧನ ನಡೆಯುವ ಮೂಲಕ ಸ್ಥಳೀಯರ ಕೈವಾಡ ಇರುವುದೂ ಸಹ ದೃಡ ಪಟ್ಟಿತ್ತು.
ಜಾನುವಾರುಗಳು ಸಾಗಿಸಲ್ಪಡುವ ವಾಹನಗಳ ಜೊತೆ ಬೆಂಗಾವಲಾಗಿ ಕಾರುಗಳಲ್ಲಿ ಸಂಚರಿಸುತ್ತಿರುವ ಕೇರಳ ಮೂಲದ ವ್ಯಕ್ತಿಗಳನ್ನು ಸಹ ಪೊಲೀಸರು ಬಂಧಿಸಿದ್ದರು.
ದೇಶದ ಬೇರೆ ಬೇರೆ ಭಾಗಗಳಿಂದ ಜಾನುವಾರುಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದ್ದು ಅಲ್ಲಲ್ಲಿ ಸಕ್ರಿಯರಾಗಿರುವ ಸ್ಥಳೀಯರು ಜಾನುವಾರುಗಳನ್ನು ಒದಗಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗೆ ವರ್ಗಾವಣೆಗೊಂಡ ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ಅವರು ಅಕ್ರಮ ಜಾನುವಾರುಗಳ ಸಾಗಟ ತಡೆಗೆ ಕಠಿಣ ಕ್ರಮ ಕೈಗೊಂಡಿದ್ದರು ಇದೀಗ ನೂತನ ಪೊಲೀಸ್ ವರಿಷ್ಠರು ಸಹ ಈ ದಿಶೆಯಲ್ಲಿ ಗಂಭೀರ ಕ್ರಮಕ್ಕೆ ಮುಂದಾಗಬೇಕಾಗಿದೆ.