ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಗಳೂರು:
ಗೋವಿನ ಸಂರಕ್ಷಣೆಯ ಹಿನ್ನೆಲೆಯಲ್ಲಿ ಈಗಾಗಲೇ ನೂತನ ಗೋ ರಕ್ಷಾ ಕಾಯಿದೆ ಜಾರಿಗೆ ಬಂದಿದ್ದು, ಇದರ ಸಮರ್ಪಕ ಅನುಷ್ಠಾನವಾಗಬೇಕು. ಜಾನುವಾರುಗಳ ವಧೆ ಅಥವಾ ಕುರ್ಬಾನಿ ನಡೆದ ಮನೆ ಅಥವಾ ಕಟ್ಟಡವನ್ನು ಸೀಜ್ ಮಾಡುವ ಮೂಲಕ ಹೊಸ ಕಾಯಿದೆಯನ್ವಯ ಪ್ರಕರಣ ದಾಖಲಿಸಬೇಕು ಎಂದು ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಹೊಸ ಕಾನೂನು ಜಾರಿಯಾಗಿದ್ದರೂ ಅಲ್ಲಲ್ಲಿ ಗೋ ಕಳ್ಳತನದಂತಹ ಘಟನೆಗಳು ನಡೆಯುತ್ತಲೇ ಇವೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹೊಸ ಕಾನೂನಿನನ್ವಯ ಶಿಕ್ಷೆ ವಿಧಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.
ಜು.19ರಿಂದ 21ರವರೆಗೆ ಬಕ್ರೀದ್ ಆಚರಣೆ ನಡೆಯಲಿದ್ದು, ಈ ಸಂದರ್ಭ ಕದ್ದುಮುಚ್ಚಿ ಗೋವುಗಳ ಹತ್ಯೆಯಾಗುವ ಸಾಧ್ಯತೆಯಿದೆ.ಯಾವುದೇ ಕಾರಣಕ್ಕೂ ಗೋವುಗಳ ಕುರ್ಬಾನಿಯಾಗದಂತೆ ಸಂಬಂಧಪಟ್ಟ ಇಲಾಖೆ ನೋಡಿಕೊಳ್ಳಬೇಕು. ಬಲಿ ಪ್ರಕರಣಗಳು ನಡೆದರೆ ಹಿಂದು ಸಮಾಜ ಸಹಿಸುವುದಿಲ್ಲ. ಆದ್ದರಿಂದ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಹೇಳಿದರೆ.
ಅಕ್ರಮವಾಗಿ ಗೋವಿನ ವಧೆ ನಡೆದರೆ ಹೊಸ ಕಾನೂನಿನನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಕೂಡ ಈ ನಿಟ್ಟಿನಲ್ಲಿ ಪ್ರಾಣಿ ಬಲಿ ನಿಷೇಧ, ವಿವಿಧ ಕಾಯಿದೆ ಹಾಗೂ ಕೋರ್ಟ್ ಆದೇಶವನ್ನು ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ನಿರ್ದೇಶಕರು ಹಾಗೂ ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಮೂಲಕ ಆದೇಶಿಸಿದೆ. ಆದ್ದರಿಂದ ದ.ಕ. ಜಿಲ್ಲಾಡಳಿತ ಕೂಡ ಗೋ ವಧೆಗೆ ಅವಕಾಶ ಕಲ್ಪಿಸಬಾರದು ಎಂದು ಪುರಾಣಿಕ್ ಆಗ್ರಹಿಸಿದರು.
ರಾಜ್ಯದಲ್ಲಿ ಪ್ರಬಲ ಗೋ ರಕ್ಷಾ ಕಾಯಿದೆ ಬಂದಿರುವುದರಿಂದ ಯಾರಾದರೂ ಕುರ್ಬಾನಿ ಹೆಸರಿನಲ್ಲಿ ಗೋವಿನ ವಧೆ ನಡೆಸಿದರೆ ಅಂತವರಿಗೆ ೩ರಿಂದ ೭ ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1ರಿಂದ 5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಗೊ ಕಳ್ಳತನ ಮಾಡಿ ಅಕ್ರಮವಾಗಿ ಮನೆ ಅಥವಾ ಯಾವುದೇ ಕಟ್ಟದಲ್ಲಿ ವಧೆ ಮಾಡಿದರೆ ಅಂತಹ ಮನೆ ಅಥವಾ ಕಟ್ಟವನ್ನು ಮುಟ್ಟುಗೋಲು ಹಾಕಲು ಕಾನೂನಿನಲ್ಲಿ ಅವಕಾಶವಿದೆ. ಈ ರೀತಿ ಒಂದಷ್ಟು ಮನೆ ಅಥವಾ ಕಟ್ಟಡಗಳು ಸೀಜ್ ಆದರೆ ಗಂಭೀರತೆಯ ಅರಿವಾಗಲು ಸಾಧ್ಯ. ಅಲ್ಲದೆ ಜಾಗೃತಿಯೂ ಮೂಡುತ್ತದೆ. ಗೋ ವಂಶದ ರಕ್ಷಣೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ನೂತನ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದವರು ಹೇಳಿದರು.
ಜಿಲ್ಲಾ ಗೋ ಸಂರಕ್ಷಣಾ ಪ್ರಮುಖ್ ಕಟೀಲು ದಿನೇಶ್ ಪೈ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಬೀಳಲೇಬೇಕು. ಗೋವುಗಳ ಸಂರಕ್ಷಣೆಯಷ್ಟೇ ನಮ್ಮ ಪ್ರಮುಖ ಉದ್ದೇಶವಾಗಿದೆ. ನೂತನ ಕಾಯ್ದೆ ಬಂದು ಹಲವು ಸಮಯವಾದರೂ ಇದರ ಪರಿಣಾಮಕಾರಿ ಅನುಷ್ಠಾನವಾಗಿಲ್ಲ. ಕುರ್ಬಾನಿ ನಡೆದ ಯಾವುದೇ ಮನೆ ಅಥವಾ ಕಟ್ಟಡ ಸೀಜ್ ಆಗಿಲ್ಲ. ಅಕ್ರಮ ಗೋ ಸಾಗಾಟ ತಡೆಯಲು ಅನವಶ್ಯಕ ಕಡೆಗಲಲ್ಲಿ ಚೆಕ್ಪೋಸ್ಟ್ ಹಾಕುವ ಬದಲು ಕಸಾಯಿಖಾನೆ ಇರುವ ಪ್ರದೇಶದಲ್ಲಿಯೇ ಚೆಕ್ಪೋಸ್ಟ್ ಹಾಕಬೇಕು ಎಂದು ಒತ್ತಾಯಿಸಿದರು.
ಗೋವುಗಳ ಕಳ್ಳತನವಾದಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆ, ಆನಿಮಲ್ ಹೆಲ್ಪ್ಲೈನ್ ಮತ್ತು ವಿಹಿಂಪ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು. ಕಟುಕರಿಗೆ ಶಿಕ್ಷೆಯಾಗುವ ಮೂಲಕ ಗೋ ವಧೆ ನಿಲ್ಲಲೇ ಬೇಕು. ಆದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೂತನ ಕಾಯ್ದೆಯ ಅನುಷ್ಠಾನಕ್ಕೆ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಗೋ ರಕ್ಷಾ ಪ್ರಮುಖರಾದ ಪ್ರದೀಪ್ ಪಂಪ್ವೆಲ್, ಗುರುಪ್ರಸಾದ್ ಉಳ್ಳಾಲ, ಬಜರಂಗದಳ ಜಿಲ್ಲಾ ಸಂಯೋಜಕ್ ಪುನೀತ್ ಅತ್ತಾವರ ಉಪಸ್ಥಿತರಿದ್ದರು