ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಪ್ರತ್ಯಂಗೀರಾ ದೇವಾಲಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ವಿಚಾರ ರಾಜ್ಯ ರಾಜಕಾರಣದಲ್ಲಿ ‘ಶತ್ರು ಸಂಹಾರ’ದ ಚರ್ಚೆಗೆ ಶುರುವಾಗಿದೆ.
ಪ್ರತ್ಯಂಗೀರಾ ದೇವಾಲಯದಲ್ಲಿ ಸಾಮಾನ್ಯವಾಗಿ ಶತ್ರುಗಳ ಸಂಹಾರಕ್ಕಾಗಿ ಪೂಜೆ ಮಾಡಲಾಗುತ್ತದೆ. ಜೊತೆಗೆ ತಮ್ಮಲ್ಲಿನ ನಕಾರಾತ್ಮಕ ಶಕ್ತಿ ಹೋಗಲೆಂದು ಪೂಜೆ ಮಾಡಲಾಗುತ್ತದೆ. ಹೀಗಾಗಿ ಡಿಕೆಶಿ ಪೂಜೆ ಬೆನ್ನಲ್ಲೇ ಶತ್ರು ಸಂಹಾರ ಪೂಜೆ ಮಾಡಿಸಿದ್ರಾ ಎಂಬ ಪ್ರಶ್ನೆ ಶುರುವಾಗಿದೆ.
ಇದೇ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಎಲ್ಲರನ್ನೂ ದೇವರೆ ಕಾಪಾಡಬೇಕು. ಅಧಿಕಾರ ಬೇಕು ಅಂತ ಅಲ್ಲಿ, ಮತ್ತೆಲ್ಲೋ ಶತ್ರು ನಾಶಕ್ಕೆ ಹೋಗೋದು. ಅಲ್ಲೂ ಕೂಡಾ ದೇವರನ್ನ ಕೇಳೋದು ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡು ಅಂತಾನೇ ಅನ್ನೋ ಮೂಲಕ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ದಿನ ಪೂಜೆ ಮಾಡುತ್ತೇನೆ. ಪ್ರತಿ ದಿನ ನನಗೆ ಒಳ್ಳೆಯದು ಆಗಲಿ ಎಂದು ಪೂಜೆ ಮಾಡ್ತೇನೆ. ನನಗೆ ಯಾರಾದರೂ ತೊಂದರೆ ಕೊಡ್ತಾರೆ, ಅವರಿಂದ ನನಗೆ ರಕ್ಷಣೆ ಸಿಗಲಿ ಎಂದು ಕೇಳಿಕೊಳ್ತೇನೆ. ಇದರಲ್ಲಿ ಯಾವುದೇ ಮುಚ್ಚು ಮೊರೆ ಯಾವುದೂ ಇಲ್ಲ ಎಂದಿದ್ದಾರೆ.