ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಹಸುವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಹೇಳಿದೆ.
ಗೋಸಂರಕ್ಷಣೆಯನ್ನು ಹಿಂದುಗಳ ಮೂಲಭೂತ ಹಕ್ಕನ್ನಾಗಿ ಮಾಡಬೇಕು. ಏಕೆಂದರೆ ದೇಶದ ಸಂಸ್ಕೃತಿ ಮತ್ತು ಅದರ ನಂಬಿಕೆಗೆ ಧಕ್ಕೆಯಾದಾಗ, ದೇಶ ದುರ್ಬಲವಾಗುತ್ತದೆ ಎಂದು ನಮಗೆ ತಿಳಿದಿದೆ ಎಂದು ಹಸುವನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ ಜಾವೇದ್ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್, ಜಾಮೀನು ಅರ್ಜಿ ತಿರಸ್ಕರಿಸಿದೆ.
ಜಾಮೀನು ನಿರಾಕರಿಸಿದ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಪೀಠವು ಅರ್ಜಿದಾರರು ಹಸುವನ್ನು ಕಳ್ಳತನ ಮಾಡಿದ ನಂತರ ಅದನ್ನು ಕೊಂದರು. ಅದರ ತಲೆ ಕತ್ತರಿಸಿ, ಅದರ ಮಾಂಸವನ್ನು ಜೊತೆಯಲ್ಲಿ ಇರಿಸಿದ್ದರು ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಮೂಲಭೂತ ಹಕ್ಕು ಕೇವಲ ಗೋಮಾಂಸ ಭಕ್ಷಕರ ಪರಮಾಧಿಕಾರವಲ್ಲ, ಬದಲಾಗಿ, ಹಸುವನ್ನು ಪೂಜಿಸುವವರು ಆರ್ಥಿಕವಾಗಿ ಹಸುಗಳ ಮೇಲೆ ಅವಲಂಬಿತರಾಗಿದ್ದಾರೆ, ಅರ್ಥಪೂರ್ಣವಾದ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಬದುಕುವ ಹಕ್ಕು ಕೊಲ್ಲುವ ಹಕ್ಕಿಗಿಂತ ಮೇಲು. ಗೋಮಾಂಸ ತಿನ್ನುವ ಹಕ್ಕನ್ನು ಎಂದಿಗೂ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗದು.
ಹಸು ವಯಸ್ಸಾದಾಗ ಮತ್ತು ಅನಾರೋಗ್ಯವಾಗಿದ್ದರೂ ಕೂಡ ಉಪಯುಕ್ತವಾಗಿದೆ. ಅದರ ಸೆಗಣಿ ಮತ್ತು ಮೂತ್ರವು ಕೃಷಿಗೆ, ಔಷಧಗಳ ತಯಾರಿಕೆಗೆ ತುಂಬಾ ಉಪಯುಕ್ತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅದಕ್ಕೆ ವಯಸ್ಸಾದಾಗ ಅಥವಾ ಅನಾರೋಗ್ಯಕ್ಕೆ ಒಳಗಾದಾಗಲೂ ತಾಯಿಯಂತೆ ಪೂಜಿಸಲಾಗುತ್ತದೆ. ಅದನ್ನು ಕೊಲ್ಲುವ ಹಕ್ಕನ್ನು ಯಾರಿಗೂ ನೀಡಲಾಗುವುದಿಲ್ಲ.
ಗೋವುಗಳ ಮಹತ್ವವನ್ನು ಕೇವಲ ಹಿಂದುಗಳು ಮಾತ್ರ ಅರ್ಥಮಾಡಿಕೊಂಡಿರುವುದಲ್ಲ. ಮುಸ್ಲಿಮರು ತಮ್ಮ ಆಳ್ವಿಕೆಯಲ್ಲಿ ಗೋವನ್ನು ಭಾರತದ ಸಂಸ್ಕೃತಿಯ ಒಂದು ಪ್ರಮುಖ ಭಾಗವೆಂದು ಪರಿಗಣಿಸಿದ್ದಾರೆ. 5 ಮುಸ್ಲಿಂ ಆಡಳಿತಗಾರರು ಗೋಹತ್ಯೆಯನ್ನು ನಿಷೇಧಿಸಿದರು. ಬಾಬರ್, ಹುಮಾಯೂನ್ ಮತ್ತು ಅಕ್ಬರ್ ತಮ್ಮ ಧಾರ್ಮಿಕ ಹಬ್ಬಗಳಲ್ಲಿ ಹಸುಗಳನ್ನು ಬಲಿ ನೀಡುವುದನ್ನು ನಿಷೇಧಿಸಿದರು. ಮೈಸೂರಿನ ನವಾಬ ಹೈದರ್ ಅಲಿ ಗೋಹತ್ಯೆಯನ್ನು ಶಿಕ್ಷಾರ್ಹ ಅಪರಾಧವಾಗಿಸಿದರು ಎಂದು ಕೋರ್ಟ್ ಹೇಳಿದೆ.
ದೇಶದ ವಿವಿಧ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಗೋವಿನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅದರ ರಕ್ಷಣೆ, ದೇಶದ ಜನರ ನಂಬಿಕೆ, ಸಂಸತ್ತು ಮತ್ತು ಶಾಸಕಾಂಗ ಸಭೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿರ್ಧಾರಗಳನ್ನು ನೀಡಿವೆ. ಹಸುಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸಮಯದೊಂದಿಗೆ ಹೊಸ ನಿಯಮಗಳನ್ನು ಸಹ ಮಾಡಲಾಗಿದೆ.
ಕೆಲವೊಮ್ಮೆ ಗೋವಿನ ರಕ್ಷಣೆ ಮತ್ತು ಸಮೃದ್ಧಿಯ ಬಗ್ಗೆ ಮಾತನಾಡುವವರು ಗೋವು ತಿನ್ನುವವರಾಗುವುದನ್ನು ನೋಡುವುದು ತುಂಬಾ ನೋವಿನ ಸಂಗತಿ. ಸರ್ಕಾರವು ಗೋಶಾಲೆಗಳನ್ನು ಸಹ ನಿರ್ಮಿಸಿದೆ, ಆದರೆ, ಹಸುಗಳನ್ನು ನೋಡಿಕೊಳ್ಳಲು ಜವಾಬ್ದಾರಿ ವಹಿಸಿಕೊಂಡಿರುವ ಜನರು ಕಾಳಜಿ ವಹಿಸುವುದಿಲ್ಲ ಎಂದು ಹೇಳಲಾಗಿದೆ.
ಗೋಶಾಲೆಗಳಲ್ಲಿ ಹಸುಗಳು ಹಸಿವಿನಿಂದ ಮತ್ತು ರೋಗದಿಂದ ಸಾಯುತ್ತವೆ. ಕೊಳಕಿನ ನಡುವೆ ಇರುತ್ತವೆ. ಆಹಾರವಿಲ್ಲದೇ ಅನೇಕ ಸಲ ಹಸುಗಳು ಪಾಲಿಥಿನ್ ತಿನ್ನುತ್ತವೆ. ಇದರ ಪರಿಣಾಮವಾಗಿ ಅನಾರೋಗ್ಯಕ್ಕೆ ತುತ್ತಾಗಿ ಸಾಯುತ್ತವೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದೆ.
ಹಾಲು ನೀಡುವುದನ್ನು ನಿಲ್ಲಿಸಿದ ಹಸುಗಳ ಸ್ಥಿತಿಯನ್ನು ರಸ್ತೆಗಳು ಮತ್ತು ಬೀದಿಗಳಲ್ಲಿ ಕಾಣಬಹುದು. ಅನಾರೋಗ್ಯ, ಹಾಲು ಕೊಡದ ಹಸುಗಳನ್ನು ಕಡೆಗಣಿಸಲಾಗುತ್ತದೆ. ಯಾರು ಗೋವಿನ ಸಂರಕ್ಷಣೆಯ ಬಗ್ಗೆ ಪ್ರಚಾರ ಮಾಡುತ್ತಾರೆಯೋ ಅಂತಹ ಜನ ಏನು ಮಾಡುತ್ತಿದ್ದಾರೆ. ಎಲ್ಲರೂ ಗೋವು ರಕ್ಷಣೆಗೆ ಮುಂದಾಗಬೇಕೆಂದು ಹೇಳಲಾಗಿದೆ.