Sunday, July 3, 2022

Latest Posts

ಉತ್ತಮ ಆಡಳಿತ ನೀಡಿದ ಪ್ರಧಾನಿಗೆ ಪತ್ರದ ಮೂಲಕ ಅಭಿನಂದನೆ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದಾದ್ಯಂತ ಜನರು ಪತ್ರ ಬರೆಯುವ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೇವಾ ಮತ್ತು ಸಂಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರು ಕಳೆದ ಇಪ್ಪತ್ತು ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮೂರು ಬಾರಿ ಮುಖ್ಯಮಂತ್ರಿ ಹಾಗೂ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಅವರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ದೇಶದ ಜನರಿಗೆ ಉತ್ತಮ ಆಡಳಿತ ನೀಡಿದ್ದಾರೆ. ಹಾಗಾಗಿ ಫಲಾನುಭವಿಗಳು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ದೇಶಾದ್ಯಂತ ೫ ಕೋಟಿ ಜನರು ಪತ್ರ ಬರೆಯುವ ಮೂಲಕ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಿ ಆದ ಮೇಲೆ ದೇಶದ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದಿಲ್ಲೊಂದು ಸೌಲಭ್ಯು ದೊರೆಯುವಂತೆ ನೋಡಿಕೊಂಡಿದ್ದಾರೆ. ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ದೇಶದ ಘನತೆಯನ್ನು ಎತಿ ಹಿಡಿದಿದ್ದಾರೆ. 135 ಕೋಟಿ ಜನರಿರುವ ದೇಶದಲ್ಲಿ ಕೊರೋನಾ ಹಾವಳಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್, ಕೋವಿಶೀಲ್ಡ್ ಕಂಡುಹಿಡಿಯುವ ಮೂಲಕ ಕೊರೋನಾದಿಂದ ದೇಶದಲ್ಲಿ ಹೆಚ್ಚು ಅನಾಹುತ ಆಗುವುದನ್ನು ತಡೆದಿದ್ದಾರೆ. ಕೋವಿಡ್ ಲಸಿಕಾ ಮಹಾ ಅಭಿಯಾನ ನಡೆಸುವ ಮೂಲಕ ದೇಶದ 70 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಅಲ್ಲದೇ ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ವ್ಯಾಕ್ಸಿನ್ ನೀಡುವ ಮೂಲಕ ಸೋದರ ಬಾಂಧವ್ಯ ಬೆಸೆದಿದ್ದಾರೆ. ಕಾಂಗ್ರೆಸ್ ಮಾಡಲಾಗದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಸೇವೆ ಮತ್ತು ಸಂಘಟನೆ ಹೆಸರಿನಲ್ಲಿ ಕಳೆದ ಸೆ.17 ರಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಇಂದು ಪೋಸ್ಟ್ ಕಾರ್ಡ್ ಅಭಿಯಾಣ ನಡೆಸಲಾಗುತ್ತಿದೆ. ಪ್ರತಿ ಬೂತ್‌ಗಳಿಂದಲೂ ಪತ್ರಗಳನ್ನು ಬರೆದು ಪ್ರಧಾನಿಗೆ ಕಳಿಸಲಾಗುತ್ತಿದೆ. ಅದರಂತೆ ಜಿಲ್ಲೆಯಾದ್ಯಂತ ಸುಮಾರು ೪೦ ಸಾವಿರ ಪೋಸ್ಟ್ ಕಾರ್ಡ್‌ಗಳನ್ನು ಬರೆದು ಕಳಿಸಲಾಗುವುದು ಎಂದು ಹೇಳಿದರು.
ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶೈಲಜಾ ರೆಡ್ಡಿ, ಭುವನೇಶ್ವರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಅಭಿಯಾನದ ಸಂಚಾಲಕ ಸಂಪತ್‌ಕುಮಾರ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ನಾಗರಾಜ್ ಬೇದ್ರೆ, ಶಿವಣ್ಣಾಚಾರ್, ಭಾರ್ಗವಿ ದ್ರಾವಿಡ್, ಶಂಭು, ಕಿರಣ್ ಸೇರಿದಂತೆ ಮತ್ತಿತರ ಕಾರ್ಯಕರ್ತರು ಈ ಅಭಿಯಾನದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss