Wednesday, August 10, 2022

Latest Posts

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:  ಪರೀಕ್ಷೆಗೆ ಕೇವಲ 70ರಷ್ಟು ಪಠ್ಯ ಮಾತ್ರ ಅನ್ವಯ

ಹೊಸದಿಗಂತ ವರದಿ, ಮಂಗಳೂರು:

ಎಸ್ಎಸ್ಎಲ್ ಸಿ ಪರೀಕ್ಷೆಗೆ ಶೇ.70 ಪಠ್ಯ ಮಾತ್ರ ಅನ್ವಯಿಸಲಾಗುವುದು. ಈ ಬಗ್ಗೆ ಪೋಷಕರು ಆತಂಕಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಗತ್ಯ ಪಠ್ಯ ವಿಷಯಗಳನ್ನು ಶೇ.70 ಭಾಗದಲ್ಲಿ ಒಳಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ಪೋಷಕರ ಜತೆ ಮಾತನಾಡಿದ್ದೇನೆ.

ಖಾಸಗಿ ಶಾಲೆಗಳ ಶುಲ್ಕ ರಿಯಾಯಿತಿ ಸಂಬಂಧಿಸಿದ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರವಾಗಿ ಒಂದು ಸೂತ್ರ ಕಂಡುಹಿಡಿಯುತ್ತೇವೆ. ಶೇ. 30 ಶುಲ್ಕ ರಿಯಾಯಿತಿ ಸಂಬಂಧಿಸಿದ ಸರಕಾರದ ತೀರ್ಮಾನವನ್ನು ಖಾಸಗಿ ಶಾಲೆಯವರು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಅನೇಕ ಪೋಷಕರು ಶುಲ್ಕ ಪಾವತಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಸಮಸ್ಯೆಗೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯವರು ಪರಸ್ಪರ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕಿತ್ತು. ಇದು ನಡೆಯದ ಕಾರಣ ಸರಕಾರ ಶುಲ್ಕ ರಿಯಾಯಿತಿ ತೀರ್ಮಾನ ತೆಗೆದುಕೊಂಡಿತ್ತು.

ಈಗಾಗಲೇ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳ ಮುಂದಿನ ವರ್ಷದ ಶುಲ್ಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಕೊರೋನಾ ನಿಯಂತ್ರಣಕ್ಕೆ ಕೇರಳೀಯರ ಕರ್ನಾಟಕ ಪ್ರವೇಶ ನಿರ್ಬಂಧ ಸಂಬಂಧಿಸಿ ಆರೋಗ್ಯ ಸಲಹಾ ಸಮಿತಿ ಕಾಲಕಾಲಕ್ಕೆ ನೀಡಿದ ಸಲಹೆ ಆಧರಿಸಿ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಇಲ್ಲಿನ‌ ಪರಿಸ್ಥಿತಿ ಬಗ್ಗೆ ಸ್ಥಳೀಯ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಸುರೇಶ್ ಕುಮಾರ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss