ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ಸ್ಟಾರ್ ನಟ ಧನುಶ್ ಮೇಲೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಹೇರಿದ್ದ ನಿಷೇಧ ತೆರವಾಗಿದೆ.
ನಿಮಾಗಳಿಗೆ ಡೇಟ್ಸ್ ನೀಡಿಲ್ಲವೆಂಬ ಕಾರಣಕ್ಕೆ ಈ ನಿಷೇಧ ಹೇರಲಾಗಿತ್ತು. ಧನುಶ್ ಮೇಲೆ ಹೇರಲಾದ ನಿಷೇಧಕ್ಕೆ ತೀವ್ರ ವಿರೋಧ ಕಲಾವಿದರಿಂದ ವ್ಯಕ್ತವಾಗಿತ್ತು. ಈ ಬಗ್ಗೆ ತಮಿಳು ಚಿತ್ರರಂಗದ ಕಲಾವಿದರ ಸಂಘ ಮಧ್ಯಸ್ಥಿಕೆ ವಹಿಸಿ, ನಿರ್ಮಾಪಕರ ಸಂಘದೊಂದಿಗೆ ಮಾತುಕತೆ ಆಡಿದ ಮೇಲೆ ಇದೀಗ ವಿವಾದ ಬಗೆಹರಿದಿದೆ. ಧನುಶ್ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಈ ಹಿಂದೆ ಧನುಷ್ ವಿರುದ್ಧ ಕೆಲ ಆರೋಪಗಳನ್ನು ಮಾಡಿತ್ತು. ಧನುಶ್ ವೃತ್ತಿಪರವಲ್ಲದ ನಡವಳಿಕೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿತ್ತು, ನಿರ್ಮಾಪಕರಿಂದ ಮುಂಗಡ ಹಣ ಪಡೆದ ಬಳಿಕವೂ ಡೇಟ್ಸ್ ನೀಡದೆ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎಂದು ನಿರ್ಮಾಪಕರ ಸಂಘ ಆರೋಪಿಸಿ ಅವರೊಟ್ಟಿಗೆ ಕೆಲಸ ಮಾಡುವುದಿಲ್ಲವೆಂದು ನಿಷೇಧ ಹೇರಿತ್ತು. ಆದರೆ, ಇದೀಗ ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ನಿರ್ಮಾಪಕರ ಸಂಘ ಹಿಂತೆಗೆದುಕೊಂಡಿದೆ.
ಈ ಹಿಂದೆ ತೆನಾಂಡಾಲ್ ಫಿಲಮ್ಸ್ ಮತ್ತು 5 ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರುಗಳು ನಿರ್ಮಾಪಕರ ಸಂಘಕ್ಕೆ ಧನುಶ್ ವಿರುದ್ಧ ದೂರು ನೀಡಿದ್ದರು. ಅದರ ವಿಚಾರಣೆ ಬಳಿಕವೇ ಧನುಶ್ ವಿರುದ್ಧ ನಿಷೇಧ ಹೇರಲಾಗಿತ್ತು. ಇದೀಗ ಮಾತು-ಕತೆ ಮೂಲಕ ಸಮಸ್ಯೆ ಬಗೆಹರಿಸಲಾಗಿತ್ತು. ತೆನಾಂಡಾಲ್ ಫಿಲಮ್ಸ್ ಜೊತೆಗೆ ಹೊಸ ಸಿನಿಮಾ ಮಾಡುವುದಾಗಿ ಧನುಶ್ ಒಪ್ಪಿಕೊಂಡಿದ್ದಾರೆ ಅಲ್ಲದೆ 5 ಸ್ಟಾರ್ ಕ್ರಿಯೇಷನ್ಸ್ನಿಂದ ಪಡೆದಿದ್ದ ಹಣವನ್ನು ಮರಳಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ನಿರ್ಮಾಪಕರ ಸಂಘ ಧನುಷ್ ವಿರುದ್ಧ ಹೇರಿದ್ದ ನಿಷೇಧವನ್ನು ಹಿಂಪಡೆದಿದೆ.